ಕೊಪ್ಪಳ: ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾಗಿರುವ ಹಿನ್ನೆಲೆ, ಜಿಲ್ಲೆಯ ಮುನಿರಾಬಾದ್ ಹಾಗೂ ಶ್ರೀರಾಮನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಸ್ಥಗಿತ ಮಾಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳ ಪಾಸಿಟಿವ್ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವುದು ತಿಳಿದುಬಂದಿದೆ. ಸದ್ಯ ಜಿಲ್ಲೆಯಲ್ಲಿ ಶೇಕಡ 15 ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ. ಹಾಗಿದ್ದಾಗ್ಯೂ ಸಹ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಅನ್ನು ಕಡಿಮೆ ಮಾಡದೆ ಇನ್ನೂ ಹೆಚ್ಚಿಸಲಾಗಿದೆ.
ಜನರು ಲಾಕ್ಡೌನ್ಗೆ ಸಹಕರಿಸಿದರೆ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಮತ್ತಷ್ಟು ಕಡಿಮೆಯಾಗಲಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್, ಹಿಟ್ನಾಳ್ ಹಾಗೂ ಗಂಗಾವತಿಯಲ್ಲಿ ಪಾಸಿಟಿವಿಟಿ ದರ ಹೆಚ್ಚಿದ್ದು, ಅಲ್ಲಿ ಕೂಡಾ ನಾವು ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ಮಾಡಿಸುತ್ತಿದ್ದೇವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 2,415 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢ
ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ವಿಭಾಗ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.