ಕೊಪ್ಪಳ: ಕೊರೊನಾ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರ ಲ್ಯಾಬ್ ರಿಪೋರ್ಟ್ ನೆಗೆಟಿವ್ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಢಾಣಕ ಶಿರೂರು ಗ್ರಾಮಕ್ಕೆ ಹೋದ ನಿಲೋಗಲ್ ಗ್ರಾಮದ 18 ಮಂದಿ, ಕೊರೊನಾ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು ಕೊಪ್ಪಳದ ಜನರು ನಿರಾಳರಾಗಿದ್ದಾರೆ.
ಪ್ರೊಟೋಕಾಲ್ ಪ್ರಕಾರ, ಈ 18 ಜನರ ಮಾದರಿಯನ್ನು ಎರಡನೇ ಬಾರಿಗೆ ಮರುಪರೀಕ್ಷಿಸಲು ಮೇ 13 ರಂದು ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಇನ್ನು ದ್ವಿತೀಯ ಸಂಪರ್ಕ ಹೊಂದಿದ್ದ ಯಲಬುರ್ಗಾ ತಾಲೂಕಿನ 25 ಜನರ ಪೈಕಿ 22 ಮಂದಿಯ ವರದಿಯೂ ನೆಗೆಟಿವ್ ಬಂದಿದೆ. ಇನ್ನೂ ಮೂರು ಜನರ ಲ್ಯಾಬ್ ವರದಿ ಬರಬೇಕಿದೆ.
ಈವರೆಗೆ ಜಿಲ್ಲೆಯಿಂದ ಒಟ್ಟು 1,114 ಜನರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 1,078 ವರದಿ ನೆಗೆಟಿವ್ ಬಂದಿದೆ. ಇದರಲ್ಲಿ 36 ಜನರ ವರದಿ ಇನ್ನಷ್ಟೇ ಕೈಸೇರಬೇಕಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಕೇಸ್ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.