ಕೊಪ್ಪಳ: ಕೊರೊನಾ ಕರಿ ನೆರಳು ಎಲ್ಲಾ ಕ್ಷೇತ್ರಗಳ ಮೇಲೂ ಬಿದ್ದಿದೆ. ಅದು ಈಗಲೂ ಮುಂದುವರೆದಿದ್ದು, ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿ ತಯಾರಿಸಿ ಒಂದಿಷ್ಟು ದುಡಿಮೆ ಮಾಡಿಕೊಳ್ಳುತ್ತಿದ್ದ ಮೂರ್ತಿ ತಯಾರಕರಿಗೆ ಸಂಕಷ್ಟ ಎದುರಾಗಿದೆ.
ಗಣೇಶೋತ್ಸವಕ್ಕೆ ತಿಂಗಳು ಮುಂಚಿತವಾಗಿಯೇ ಗಣೇಶ ಮೂರ್ತಿ ತಯಾರಕ ಕಲಾವಿದರು ವಿವಿಧ ಭಾವ ಭಂಗಿಯ, ಆಕಾರದ ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ನಿರತರಾಗಿರುತ್ತಿದ್ದರು. ಗಣೇಶ ಮೂರ್ತಿ ತಯಾರಿಕೆಯಿಂದಲೇ ಅನೇಕ ಕುಟುಂಬಗಳು ಒಂದಿಷ್ಟು ಆದಾಯ ಪಡೆಯುತ್ತಿದ್ದವು.
ಆದರೆ ಈ ಬಾರಿ ಗಣೇಶೋತ್ಸವದ ಮೇಲೆ ಕೊರೊನಾ ಕರಿ ನೆರಳು ಬೀರಿದೆ. ಹೀಗಾಗಿ ಕೊಪ್ಪಳದ ಭಾಗ್ಯನಗರ ಪಟ್ಟಣ ಸೇರಿದಂತೆ ಜಿಲ್ಲೆಯಲ್ಲಿ ಇರುವ ಅನೇಕ ಗಣೇಶ ತಯಾರಿಸುವ ಕುಟುಂಬಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಪ್ರತಿ ವರ್ಷ ಗಣೇಶೋತ್ಸವಕ್ಕಾಗಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದವರು ಈ ಬಾರಿ ಸಣ್ಣ ಸಣ್ಣ ಗಣೇಶಮೂರ್ತಿಗಳನ್ನು ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.
ಆದರೂ ಈ ಬಾರಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಮಾಡಿದ ಕಡಿಮೆ ಗಣೇಶ ಮೂರ್ತಿಗಳು ಸಹ ಬಿಕರಿಯಾಗುತ್ತಿಲ್ಲ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಮಾಡಿರುವ ಗಣೇಶ ಮೂರ್ತಿಗಳು ಖರೀದಿ ಆಗಬಹುದು ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಭಾಗ್ಯನಗರ ಪಟ್ಟಣದ ಗಣೇಶ ಮೂರ್ತಿಗಳ ತಯಾರಕರಾದ ತಾರಾ ಚಿತ್ರಗಾರ. ಕೊರೊನಾ ಭೀತಿಯಿಂದಾಗಿ ಜನರ ಕೈಯಲ್ಲಿ ದುಡಿಮೆ ಕಡಿಮೆಯಾಗಿದೆ. ಅದರ ಜೊತೆಗೆ ಕೊರೊನಾ ಭೀತಿ ಹಬ್ಬವನ್ನು ಡಲ್ ಆಗಿಸಿದೆ ಎನ್ನುತ್ತಾರೆ ಅವರು. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಒಂದಿಷ್ಟು ಆದಾಯ ಗಳಿಸುತ್ತಿದ್ದ ಗಣೇಶ ಮೂರ್ತಿ ತಯಾರಕರಿಗೆ ಈ ಬಾರಿ ಹಿನ್ನಡೆಯಾದಂತಾಗಿದೆ.