ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಮನೆಗಳು ಈಗ ಭೂತ ಬಂಗಲೆಗಳಂತಾಗಿವೆ. 2005ರಲ್ಲಿಯೇ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಇಲ್ಲಿ ಮನೆ ಹಾಗೂ ನಿವೇಶನ ಯೋಜನೆ ರೂಪಿಸಿದೆ. ಅದರಂತೆ ಮೂರು ಕ್ಯಾಟಗರಿಯಲ್ಲಿ ಮನೆ ಹಾಗೂ ನಿವೇಶನ ರೆಡಿ ಮಾಡಿ, ಎಲ್ಐಜಿ (25), ಎಂಐಜಿ (20) ಹಾಗೂ ಹೆಚ್ಐಜಿಯ (05) ಮನೆಗಳನ್ನು ನಿರ್ಮಾಣ ಮಾಡಿದೆ.
ಅಲ್ಲದೇ ಎಲ್ಐಜಿಯ (54), ಎಂಐಜಿ (44) ಹಾಗೂ ಹೆಚ್ಐಜಿ ಕ್ಯಾಟಗರಿಯ 26 ನಿವೇಶನಗಳನ್ನು ಸಹ ರೂಪಿಸಿದೆ. ರಸ್ತೆ, ವಿದ್ಯುತ್ ಸಂಪರ್ಕವೂ ಇದೆ. ಆದರೆ, ಇಲ್ಲಿಯ ಮನೆ ಹಾಗೂ ನಿವೇಶನ ತೆಗೆದುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ, ಅಲ್ಲಿ ಕಾಲುವೆಯ ಹಾಗೂ ಭತ್ತದ ಗದ್ದೆಗಳ ಸೀಪೇಜ್ ವಾಟರ್ ಈ ನಿವೇಶನದಲ್ಲಿ ಹರಿಯುತ್ತಿರುವುದು ಹಾಗೂ ಭೂಮಿ ಸರಿ ಇಲ್ಲ ಎಂಬುದು. ಹೀಗಾಗಿ, ಹುಡ್ಕೋ ನಿರ್ಮಾಣ ಮಾಡಿರುವ ಮನೆಗಳು ಈಗ ಹಾಳಾಗಿ ಭೂತ ಬಂಗಲೆಗಳಾಗಿ ಮಾರ್ಪಟ್ಟಿವೆ.
ಹುಡ್ಕೋ ಮನೆಗಳು ಈಗ ಬಹುತೇಕ ಶಿಥಿಲಾವಸ್ಥೆ ತಲುಪುವ ಹಂತಕ್ಕೆ ಬಂದಿವೆ. ಮನೆಯ ಒಳಗಿನ ವಿದ್ಯುತ್ ಸಂಪರ್ಕ ಕಿತ್ತಿವೆ. ಕೆಲ ಬಾಗಿಲುಗಳು ನೆಲಕ್ಕುರುಳಿವೆ. ಮನೆಯ ಸುತ್ತಮುತ್ತ ಜಾಲಿ ಕಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಆ ಪ್ರದೇಶ ಪುಂಡ ಪೋಕರಿಗಳ ಅಡ್ಡವಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೂಪಿಸಿರುವ ಈ ಯೋಜನೆ ಕಣ್ಮುಂದೆಯೇ ಹಾಳಾಗುತ್ತಿದ್ದರೂ ಸಹ ಸಂಬಂಧಿಸಿದ ಹುಡ್ಕೋ ಅಧಿಕಾರಿಗಳು ಮಾತ್ರ ಇದನ್ನು ಸೀರಿಯಸ್ ಆಗಿ ಪರಿಗಣನೆಗೆ ತೆಗೆದುಕೊಳ್ತಿಲ್ಲ.