ಕುಷ್ಟಗಿ (ಕೊಪ್ಪಳ): ಸುಗ್ರೀವಾಜ್ಞೆ ಮೂಲಕ ಸರ್ಕಾರ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಕ್ರಮಗಳನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಜನಧನಿ ಸಂಘಟನೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆ ಕೂಗಿ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ತಾಲೂಕಿನ ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಘಟಕ, ಯುವ ಕಾಂಗ್ರೆಸ್ ಘಟಕ ಜಂಟಿಯಾಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ಜಾರಿ ಮಾಡುವ ಮೂಲಕ ಸರ್ಕಾರ ರೈತರಿಗೆ ಮೋಸ ಮಾಡಿದೆ. ರೈತ ಹಾಗೂ ಕಾರ್ಮಿಕ ವರ್ಗದ ಕಣ್ಣಿಗೆ ಸುಣ್ಣ, ಕಾರ್ಪೋರೇಟ್ ಕಂಪನಿಗಳ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಲಾಡ್ಲೆ ಮಷಕ್ ದೋಟಿಹಾಳ ಆರೋಪಿಸದರು.
ರಾಜ್ಯ ಸರ್ಕಾರ ಪ್ರವಾಹ ನಿರ್ವಹಣೆಯಲ್ಲಿ ಕೂಡ ವಿಫಲವಾಗಿದೆ. ಕೊರೊನಾ ವೈರಸ್ ಮಟ್ಟ ಹಾಕಲು ಸಾಮಗ್ರಿಗಳ ಖರೀದಿಯಲ್ಲಿ ಹಗರಣ ನಡೆಸಿದೆ. ಆಡಳಿತ ವೈಫಲ್ಯ ಮುಚ್ಚಿ ಹಾಕಲು ಜನ ವಿರೋಧಿ ನೀತಿ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು. ಕೂಡಲೇ ತಿದ್ದುಪಡಿ ಹಿಂಪಡೆಯದೇ ಇದ್ದರೆ ಕಾಂಗ್ರೆಸ್ ಹೋರಾಟ ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಸನಸಾಬ್ ದೋಟಿಹಾಳ, ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದಪ್ಪ ತಳವಾರ, ಕುಷ್ಟಗಿ ಬ್ಲಾಕ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಹಿಳಾ ಘಟಕದ ಅಧ್ಯಕ್ಷೆ ಶಂಕುತಲಾ ಹಿರೇಮಠ, ಯುವ ಘಟಕದ ಅಧ್ಯಕ್ಷ ಲಾಡ್ಲೆ ಮಷಕ್ ದೋಟಿಹಾಳ, ಶಂಕರಗೌಡ ಕಡೂರು, ತಾ.ಪಂ. ಸದಸ್ಯರಾದ ಸುರೇಶ ಕುಂಟನಗೌಡರ್, ಭೀಮಣ್ಣ ತಲೆಖಾನ್, ಉಮೇಶ ಮಂಗಳೂರು ಇದ್ದರು.