ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ರಾಜಶೇಖರ್ ಹಿಟ್ನಾಳ್ ಹೆಸರು ಘೋಷಣೆಯಾಗಿದ್ದು, ಇನ್ನುಳಿದ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ಇದರಿಂದಾಗಿ ಆಕಾಂಕ್ಷಿಗಳ ಹಾಗೂ ಅವರ ಬೆಂಬಲಿಗರಲ್ಲಿ ಅಸಮಧಾನ ವ್ಯಕ್ತವಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‍ಗೆ ಕೈ ಕೊಡುವ ಸಾಧ್ಯತೆ ಇದೆ.
ಅದರಲ್ಲೂ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ಭಾಗದಲ್ಲಿ ಪ್ರಭಾವ ಬೀರಿರುವ ಕುರುಬ ಸಮುದಾಯದ ಮುಖಂಡ ಕೆ. ವಿರುಪಾಕ್ಷಪ್ಪ ಕಾಂಗ್ರೆಸ್‍ಗೆ ಕೈಕೊಡುವ ಸಾಧ್ಯತೆ ದಟ್ಟವಾಗಿದೆ. ತಮಗೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಧಾನಗೊಂಡಿದ್ದಾರೆ. ಅಸಮಧಾನ ಯಾವುದೇ ಸಮಯದಲ್ಲಾದರೂ ಸ್ಫೋಟಗೊಳ್ಳಬಹುದು. ಈ ಕುರಿತಂತೆ ಮಾತನಾಡಿರುವ ಕೆ. ವಿರುಪಾಕ್ಷಪ್ಪ ಅವರು, ನಾನೂ ಒಬ್ಬ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ, ನನಗೆ ಟಿಕೆಟ್ ಕೈತಪ್ಪಿದೆ. ನನ್ನ ಕಾರ್ಯಕರ್ತರೂ ಸಹ ಅಸಮಧಾನಗೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ಒಂದು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.