ಕೊಪ್ಪಳ: ತಾಲೂಕಿನ ಕೋಳೂರು ಗ್ರಾಮದ ಬಳಿ ಇರುವ ಬ್ರಿಡ್ಜ್ ಕಂ ಬ್ಯಾರೇಜ್ನ ಮುಂಭಾಗದಲ್ಲಿನ ತಡೆಗೋಡೆ ನೆಲಕ್ಕುರುಳಿದೆ. ತಡೆಗೋಡೆ ಮುರಿದು ನೆಲಕ್ಕೆ ಬಿದ್ದಿರುವುದರಿಂದ ಎಡಭಾಗದಲ್ಲಿ ಹಳ್ಳದ ದಂಡೆಯಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಿರೇಹಳ್ಳ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಿಂದ ಹಿರೇಹಳ್ಳಕ್ಕೆ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕೋಳೂರು ಬಳಿಯ ಬ್ಯಾರೇಜ್ ಭರ್ತಿಯಾಗಿ ಹೆಚ್ಚಿನ ನೀರು ರಭಸದಿಂದ ಹೊರ ಹೋಗುತ್ತಿದೆ.
ನೀರಿನ ರಭಸಕ್ಕೆ ಮುಂಭಾಗದಲ್ಲಿರುವ ಎಡಭಾಗದ ತಡೆಗೋಡೆ ಈ ಬಾರಿ ಸಂಪೂರ್ಣವಾಗಿ ನೆಲಕ್ಕುರುಳಿದೆ. ಈ ಹಿಂದೆ ಒಂದು ಬಾರಿ ಇದೇ ತಡೆಗೋಡೆ ಬಿರುಕು ಬಿಟ್ಟಿತ್ತು. ಕಳಪೆ ಕಾಮಗಾರಿಯಿಂದ ತಡೆಗೋಡೆ ಬಿರುಕು ಬಿಟ್ಟಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈಗ ಅದೇ ತಡೆಗೋಡೆ ಸಂಪೂರ್ಣವಾಗಿ ನೆಲಕ್ಕುರುಳಿದೆ.