ಗಂಗಾವತಿ: ಹನುಮನ ಜನ್ಮಸ್ಥಳ ಎಂದೇ ಪ್ರಸಿದ್ಧಿಯಾಗಿರುವ ಅಂಜನಾದ್ರಿ ದೇಗುಲದ ಇತಿಹಾಸ, ಧಾರ್ಮಿಕತೆಗೆ ಧಕ್ಕೆ ತರುವಂತೆ ತಂಪು ಪಾನೀಯ ಕಂಪನಿಯೊಂದು ನಡೆದುಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಯಾಕೆಂದರೆ ದೇಗುಲದ ಪ್ರವೇಶ ದ್ವಾರದ ನಾಮಫಲಕದ ಬಹುಭಾಗವನ್ನು ತಂಪು ಪಾನೀಯ ಸಂಸ್ಥೆ ಅತಿಕ್ರಮಿಸಿಕೊಂಡಿದೆ.
ಗಂಗಾವತಿಯಿಂದ ಹುಲಿಗಿ ಮಾರ್ಗದಲ್ಲಿ ಬರುವ ಅಂಜನಾದ್ರಿ ದೇಗುಲದ ತಿರುವಿನಲ್ಲಿ ಭಕ್ತರ ಮಾಹಿತಿಗಾಗಿ ಅಂಜನಾದ್ರಿ ದೇಗುಲದ ಪ್ರವೇಶಿಸುವ ಸ್ಥಳದಲ್ಲಿ `ಆಂಜನೇಯ ಸ್ವಾಮಿ ದೇವಸ್ಥಾನ, ಅಂಜನಾದ್ರಿ' ಎಂದು ನಾಮಫಲಕವಿತ್ತು. ಇದನ್ನು ತೆರವು ಮಾಡಿರುವ ತಂಪು ಪಾನೀಯ ಸಂಸ್ಥೆ, ತನ್ನ ಸಂಸ್ಥೆಯ ಬ್ರಾಂಡ್ ಕಲರ್ ಹಾಗೂ ಲೋಗೋ ಬರುವಂತೆ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಹಾಕಿದೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇಗುಲದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ, ಅಧಿಕಾರಿಗಳು, ರಾಜಕಾರಣಿಗಳು ಹಣದ ಆಮಿಷಕ್ಕೆ ಒಳಗಾಗಿ ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ತಂಪು ಪಾನೀಯ ಸಂಸ್ಥೆಯ ನಾಮಫಲಕಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.