ಕೊಪ್ಪಳ: ರಾಜಕೀಯ ಅನುಭವ ಹೊಂದಿರುವ ಮೂರು ಜನರಿಗೆ ಅವರವರ ಹಿರಿತನಕ್ಕೆ ತಕ್ಕಂತೆ ಸ್ಥಾನ ನೀಡಲಾಗಿದೆಯೇ ಹೊರತು ಅವರು ಅಸಮಾಧಾನ ಗೊಂಡಿದ್ದಾರೆಂಬ ಕಾರಣಕ್ಕೆ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಬಸಾಪುರದಲ್ಲಿರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 4 ಬಾರಿ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಆರ್ಥಿಕ ಸಲಹೆಗಾರರು ಬೇಕಿತ್ತಾ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮೂರು ಜನ ಶಾಸಕರಿಗೆ ಅವರವರ ಹಿರತನಕ್ಕೆ ತಕ್ಕಂತೆ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ. ಅದರಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಆರ್ಥಿಕವಾಗಿ ತಿಳಿದುಕೊಂಡಿದ್ದಾರೆ. ಹಾಗಾಗಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗಲೂ ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದರು. ಆವಾಗ ಯಾಕೆ ಯಾರೂ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯೆ: ಕೋವಿಡ್ ಸಮಯದಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅಧಿಕಾರಾವಧಿ ವೇಳೆ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇರ ಆರೋಪ ಮಾಡಿರುವ ಬಗ್ಗೆ ಪ್ರತ್ರಿಕ್ರಿಯಿಸಿದ ಸಿಎಂ, ಕೋವಿಡ್ ಸಮಯದಲ್ಲಿ ನಡೆದ ಹಗರಣ ಮತ್ತು ಪಿಎಸ್ಐ ಹಗರಣ ತನಿಖೆಗಾಗಿ ಆಯೋಗ ರಚಿಸಿದ್ದೇವೆ. ಯತ್ನಾಳ್ ಅವರಲ್ಲಿರುವ ದಾಖಲೆಗಳನ್ನ ಆಯೋಗದ ಮುಂದೆ ನೀಡಲಿ. ನಾವು ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದರು.
ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಇದೆಯಾ ಎಂಬುದಕ್ಕೆ ಪ್ರತ್ರಿಕ್ರಿಯಿಸಿ, ನನಗಿನ್ನು ಯಾವುದೇ ಆಹ್ವಾನ ಬಂದಿಲ್ಲ. ಬಂದರೆ ಅದರ ಬಗ್ಗೆ ಮುಂದೆ ನೋಡುತ್ತೇನೆ ಎಂದರು. ನಿಗಮಮಂಡಳಿ ನೇಮಕ ಕುರಿತು ಈಗಾಗಲೇ ಪಟ್ಟಿ ಸಿದ್ಧಗೊಳಿಸಲಾಗಿದೆ. ಹೈಕಮಾಂಡ್ ಜೊತೆ ಮಾತನಾಡಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ಡಿಸಿ ವಿರುದ್ಧ ಗರಂ ಆದ ಸಿಎಂ: ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಕೆಲ ತಿಂಗಳಿಂದ ಅನುದಾನ ಬಂದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿಎಂ, ಯಾರ್ ರಿ ಇಲ್ಲಿ ಡಿಸಿ? ಯಾಕೆ ಅನುದಾನ ಬಂದಿಲ್ವಾ? ಯಾಕೆ ಜಮೆಯಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಡಿಸಿ ನಲಿನ್ ಅತುಲ್ ಅವರು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎಂದರು. ಗೃಹಲಕ್ಷ್ಮೀ ಯೋಜನೆ ಕಂತಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸಿಎಂ ಸೂಚಿಸದರು.
ಇದನ್ನೂ ಓದಿ: ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು: ಪ್ರಹ್ಲಾದ್ ಜೋಶಿ