ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲು ಸಿಎಂ ಯಡಿಯೂರಪ್ಪ ಜಲಾಶಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಹೇಳಿದ್ದಾರೆ.
ದೆಹಲಿಯಲ್ಲಿರುವ ಬಸವರಾಜ ದಡೇಸುಗೂರು ವಿಡಿಯೋ ಮೂಲಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಈ ವಿಷಯ ತಿಳಿಸಿದ್ದಾರೆ.
ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮೊದಲ ಬೆಳೆಗಾಗಿ ನೀರಿನ ಅಗತ್ಯವಿದೆ. ಹೀಗಾಗಿ ನಾಲೆಗೆ ನೀರು ಹರಿಸುವಂತೆ ನಾನು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆವು. ಮನವಿಗೆ ಸ್ಪಂದಿಸಿರುವ ಸಿಎಂ ಯಡಿಯೂರಪ್ಪ, ಇಂದಿನಿಂದಲೇ ನಾಲೆಗೆ ನೀರು ಬಿಡುವಂತೆ ಜಲಾಶಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಇಂದು ಮಧ್ಯಾಹ್ನದ ವೇಳೆಗೆ ನಾಲೆಗೆ ನೀರು ಹರಿಯಲಿದೆ ಎಂದು ಶಾಸಕ ಬಸವರಾಜ ದಡೇಸುಗೂರು ತಿಳಿಸಿದ್ದಾರೆ.
ಅಲ್ಲದೆ, ಈಗ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇನ್ನು ಹೆಚ್ಚಿನ ಮಳೆಯಾಗಿ ಹೆಚ್ಚಿನ ನೀರು ಜಲಾಶಯಕ್ಕೆ ಹರಿದು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.