ಕೊಪ್ಪಳ: ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಯಡಿಯೂರಪ್ಪ ಅವರು ಸಿಎಂ ಆಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದರ ಮೇಲೊಂದು ತೊಂದರೆಗಳು ಎದುರಾಗಿವೆ. ಆದರೂ ಸಹ ಅವನ್ನು ಸಿಎಂ ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡಾಗ ಅನೇಕ ಸಂಕಷ್ಟ ಎದುರಾದವು. ಆರಂಭದಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿ ಎದುರಾಯಿತು. ನೆರೆಯಿಂದ ಸಂಕಷ್ಟಕ್ಕೊಳಗಾದವರ ನೆರವಿಗೆ ಬಂದರು. ಬಳಿಕ ಉಪಚುನಾವಣೆ ಎದುರಾಯಿತು. ಅದಾದ ಬಳಿಕ ಕೊರೊನಾ ಸಂಕಷ್ಟ ಎದುರಾಯಿತು. ಈ ವೇಳೆ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ಹಾಗೂ ದೇಶದಲ್ಲಿಯೇ ಮೊದಲು ಲಾಕ್‌ಡೌನ್ ಘೋಷಣೆ ಮಾಡಿದ್ದು, ಸೇರಿದಂತೆ ಅನೇಕ ದಿಟ್ಟ ಕ್ರಮಗಳನ್ನು ಕೈಗೊಂಡರು. ಎಲ್ಲ ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದರು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಮರ್ಥ ಆಡಳಿತ ನಡೆಸಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸಮರ್ಥ ಆಡಳಿತ ನೀಡುವ ಮೂಲಕ ಜನರ ಹಾಗೂ ಕೇಂದ್ರ ಸರ್ಕಾರದ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಪೂರ್ಣ ಅವಧಿಯ ಅಧಿಕಾರ ನಡೆಸುತ್ತಾರೆ ಎಂಬ ಭರವಸೆ ಇದೆ ಎಂದು ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಉಪಕರಣ ಖರೀದಿ ವಿಚಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ದೂರು ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಬಿ. ಸಿ. ಪಾಟೀಲ್, ಕಾಂಗ್ರೆಸ್ ನವರಿಗೆ ಬೇರೆ ಕೆಲಸವಿಲ್ಲ. ಈಗಾಗಲೇ ಐವರು ಸಚಿವರು ಮಾಹಿತಿ ನೀಡಿದ್ದಾರೆ. ಆದರೂ ಸಹ ಕಾಂಗ್ರೆಸ್ ನವರು ಲೆಕ್ಕ ಲೆಕ್ಕ ಎಂದು ಹೇಳ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ನೀಡಿ ಬಿಜೆಪಿಯ ಸರ್ಕಾರದ ಮೇಲೆ ಕಪ್ಪುಚುಕ್ಕೆ ಇಡಲು ಕಾಂಗ್ರೆಸ್ ನವರು ಪ್ರಯತ್ನಿಸುತ್ತಿದ್ದಾರೆ. ಆರೋಗ್ಯ ಉಪಕರಣ ಖರೀದಿಯಲ್ಲಿ ಯಾವುದೇ ರೀತಿಯಲ್ಲಿ ಅವ್ಯವಹಾರವಾಗಿಲ್ಲ ಎಂದು ಸಚಿವ ಬಿ. ಸಿ. ಪಾಟೀಲ್ ಹೇಳಿದರು.