ಕುಷ್ಟಗಿ(ಕೊಪ್ಪಳ): ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಎಂಬುವವರು ತಮ್ಮ ಪುತ್ರನನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಅವರು ತಮ್ಮ 3 ವರ್ಷದ ಮಗ ಶ್ರೀನಿವಾಸ್ನನ್ನು ಪಟ್ಟಣದ 4ನೇ ವಾರ್ಡ್ನ 15ನೇ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿದರು. ಈ ವೇಳೆ, ನ್ಯಾಯಾಧೀಶರ ಮಗನನ್ನು ಅಂಗನವಾಡಿ ಕಾರ್ಯಕರ್ತೆ ಸುನೀತಾ ಅಬ್ಬಿಗೇರಿ, ಸಹಾಯಕಿ ದುರ್ಗಮ್ಮ ಆರತಿ ಬೆಳಗಿ ಸ್ವಾಗತಿಸಿಕೊಂಡರು.
ನ್ಯಾಯಾಧೀಶರ ಮಗ ನಮ್ಮ ಅಂಗನವಾಡಿ ಕೇಂದ್ರ ಸೇರಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ನ್ಯಾಯಾಧೀಶರ ಈ ನಡೆಯಿಂದ ನಮ್ಮ ಅಂಗನವಾಡಿ ಕೇಂದ್ರಗಳಿಗೆ ವಿಶ್ವಾಸಾರ್ಹತೆ ಹೆಚ್ಚಿದ್ದು, ಸಂತಸವಾಗಿದೆ ಎಂದು ಸಿಡಿಪಿಒ ಅಮರೇಶ್ ಹಾವಿನಾಳ ಹೇಳಿದರು.