ಕುಷ್ಟಗಿ (ಕೊಪ್ಪಳ): 371 (ಜೆ) ಕಲಂ ಸೌಲಭ್ಯದ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ವಿಭಜಿತ ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಅಥವಾ ಇಡೀ ಚಿತ್ರದುರ್ಗ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪಕ್ಕೆ ವಿರೋಧವಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿಂದುಳಿದ ಜಿಲ್ಲೆ ಎಂದು ಕಾರಣ ನೀಡಿ, ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಸೇರಿಸುವ ಪ್ರಸ್ತಾಪದ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತಾದ ಪ್ರಸ್ತಾಪದ ವರದಿ ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಡಾ. ಡಿ.ವಿ. ನಂಜುಂಡಪ್ಪನವರ ವರದಿಯಂತೆ ಹಿಂದುಳಿದ ಪ್ರದೇಶಗಳು ಹಲವಾರು ಇವೆ. ರಾಜ್ಯ ಸರ್ಕಾರ ಅಂತಹ ಹಿಂದುಳಿದ ಪ್ರದೆಶದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬಹುದಾಗಿದೆ. ಆದರೆ ರಾಜ್ಯದ ಯಾವುದೇ ಜಿಲ್ಲೆ, ತಾಲೂಕು, ಹೋಬಳಿ, ಹಳ್ಳಿಗಳನ್ನು ಯಾವುದೇ ಕಾರಣವಿದ್ದರೂ ಕೂಡ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಗೆ ಸೇರಿಸಲಿಕ್ಕಾಗದು ಎಂದಿದ್ದಾರೆ.
ಕಲ್ಯಾಣ ಕರ್ನಾಟಕ (ಹೈದ್ರಾಬಾದ ಕರ್ನಾಟಕ) ಪ್ರದೇಶಕ್ಕೆ ತನ್ನದೇ ಆದ ಹೋರಾಟದ ಇತಿಹಾಸವಿದೆ, ಹಿನ್ನೆಲೆಯೂ ಇದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹೋರಾಟಕ್ಕೆ ಸಂವಿಧಾನಾತ್ಮಕ 371 (ಜೆ) ವಿಶೇಷ ಸ್ಥಾನಮಾನ ಸಿಕ್ಕಿದೆ. ಹಾಗಾಗಿ ಇಂತಹ ಪ್ರಸ್ತಾವನೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಪರಿಗಣಿಸಬಾರದೆಂದು ಮನವಿ ಮಾಡಿದ್ದಾರೆ.
ಇದನ್ನು ಓದಿ: ಇಂದಿನಿಂದ ಬೆಂಗಳೂರಿನಲ್ಲಿ ಕೊವಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಪ್ರಯೋಗ
ಈ ಹಿಂದೆ ಗದಗ ಜಿಲ್ಲೆಯ ಕೆಲವು ಗ್ರಾಮಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಸೇರಿಸುವ ಪ್ರಸ್ತಾಪ ಬಂದಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕೈ ಬಿಟ್ಟಿರುವುದನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪತ್ರದ ಮೂಲಕ ಜ್ಞಾಪಿಸಿದ್ದಾರೆ.