ಗಂಗಾವತಿ(ಕೊಪ್ಪಳ): ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಗುರುತಿಸಲಾಗಿರುವ 60ಕ್ಕೂ ಹೆಚ್ಚು ವಯಸ್ಸಿನ ಮತ್ತು ಮೂರುವರೆ ಕೆಜಿ ತೂಕದ ಆಮೆಯೊಂದನ್ನು ಮಕ್ಕಳು ಸಂರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಇಲ್ಲಿನ ಜಯನಗರದ ಸತ್ಯನಾರಾಯಣ ಪೇಟೆಯಲ್ಲಿ ನಡೆದಿದೆ.
ಮಕ್ಕಳು ಓಣಿಯಲ್ಲಿ ಆಟವಾಡಿಕೊಂಡಿರುವ ಸಂದರ್ಭದಲ್ಲಿ ನಸುಸಂಜೆಯ ಕತ್ತಲಲ್ಲಿ ಆಮೆಯೊಂದು ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಎಸ್ಕೆಎನ್ಜಿ ಕಾಲೇಜಿನ ವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿ ಚೇತನ ಮುದ್ಗಲ್ ಜೊತೆ ಸೇರಿ ಮಕ್ಕಳು ಆಮೆಯನ್ನು ರಕ್ಷಣೆ ಮಾಡಿದ್ದಾರೆ.
ಟಬ್ನಲ್ಲಿ ನೀರು ತುಂಬಿಸಿ ಅದರಲ್ಲಿ ಆಮೆಯನ್ನು ಬಿಟ್ಟು ಆಹಾರ ನೀಡಿ ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶಿವರಾಜ ಮೇಟಿ ಅವರಿಗೆ ದೂರವಾಣಿ ಕರೆ ಮಾಡಿ ಆಮೆ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಶಿವರಾಜ ಮೇಟಿ, ತಮ್ಮ ಸಿಬ್ಬಂದಿ ಶಿವಾನಂದ ಅವರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಬಳಿಕ ಶಿವಾನಂದ್, ಆಮೆಯನ್ನು ತೆಗೆದುಕೊಂಡು ಹೋಗಿ ದೇವಘಾಟದ ಬಳಿ ತುಂಗಭದ್ರಾ ನದಿಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.
ಅರಣ್ಯ ಇಲಾಖೆಯ ಪ್ರಾದೇಶಿಕ ಅಧಿಕಾರಿ ಶಿವರಾಜ ಮೇಟಿ ಪ್ರತಿಕ್ರಿಯಿಸಿ, ಮಕ್ಕಳು ರಕ್ಷಣೆ ಮಾಡಿರುವ ಈ ಆಮೆ ಬ್ಲಾಕ್ ಮಾರ್ಷ್ ಟರ್ಟಲ್ ಎಂಬ ಜಾತಿಗೆ ಸೇರಿದೆ. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಹೊರಡಿಸಿರುವ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ ಈ ಆಮೆ ಕೆಂಪು ಪಟ್ಟಿಯಲ್ಲಿದೆ. ಸರಿ ಸುಮಾರು ಮೂರರಿಂದ ನಾಲ್ಕು ಕೆಜಿ ಭಾರವಿದ್ದು, ಸುಮಾರು 60 ವರ್ಷ ವಯಸ್ಸಾಗಿದೆ. 12ರಿಂದ 15 ಇಂಚು ಉದ್ದ, 16 ಇಂಚು ಅಗಲವಿದೆ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣಕ್ಕೆ ಸಮೀಪದ ಕೆರೆ, ದೊಡ್ಡ ಕಾಲುವೆಗಳಿಂದ ಆಮೆ ಬಂದಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನವಿಲು ರಕ್ಷಣೆ: ಇತ್ತೀಚಿಗೆ, ವಿದ್ಯುತ್ ಪ್ರವಹಿಸಿ ಎರಡು ಕಾಲು ಸ್ವಾಧೀನ ಕಳೆದುಕೊಂಡು ನರಳುತ್ತಿದ್ದ ನವಿಲನ್ನು ರಕ್ಷಿಸಿದ್ದ ಘಟನೆ ಚಾಮರಾಜನಗರದ ರಾಮಸಮುದ್ರದ ತೋಟದಲ್ಲಿ ನಡೆದಿತ್ತು. ಇಲ್ಲಿನ ಮಹಾದೇವಪ್ಪ ಎಂಬವರ ತೋಟದಲ್ಲಿ ಆಕಸ್ಮಿಕವಾಗಿ ಕರೆಂಟ್ ಶಾಕ್‌ಗೆ ತುತ್ತಾಗಿದ್ದ ನವಿಲು ಬಿದ್ದು ಒದ್ದಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಉರಗ ರಕ್ಷಕ ಸ್ನೇಕ್ ಚಾಂಪ್, ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಯ ನೆರವು ಪಡೆದು ಚಾಮರಾಜನಗರದ ಪಶು ಆರೋಗ್ಯ ಕೇಂದ್ರದಲ್ಲಿ ನವಿಲಿಗೆ ನಿರಂತರ 3 ತಾಸು ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗಿತ್ತು. ಗ್ಲೂಕೋಸ್, ಇಂಜೆಕ್ಷನ್ ಮೂಲಕ ನವಿಲು ಚೇತರಿಸಿಕೊಂಡ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದರು.
ಇದನ್ನೂ ಓದಿ: ಭದ್ರಾ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ದರ್ಶನ ನೀಡಿದ ಎರಡು ಹುಲಿಗಳು - ವಿಡಿಯೋ