ಕೊಪ್ಪಳ: ಜಗತ್ತಿನಲ್ಲಿ ಕೆಟ್ಟ ಮಕ್ಕಳಿರುತ್ತಾರೆ ಹೊರತು ಕೆಟ್ಟ ತಾಯಿ ಇರೋದಿಲ್ಲ ಎಂಬ ಮಾತು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನನ್ನು ಮಕ್ಕಳು ಮನೆಯಿಂದ ಹೊರಹಾಕಿದ್ದರೂ ಸಹ ಆ ತಾಯಿ ಮಾತ್ರ ತನ್ನ ಮಕ್ಕಳು ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುದ್ದಾಳೆ.
ಹೆತ್ತ ತಾಯಿ ಅಂದರೆ ಹಾಗೆ. ತನ್ನ ಮಕ್ಕಳು ಏನೇ ತಪ್ಪು ಮಾಡಿದರೂ ಸಹ ಒಂದು ಕ್ಷಣ ಅದನ್ನು ವ್ಯಕ್ತಪಡಿಸಿ ಮತ್ತೊಂದು ಕ್ಷಣಕ್ಕೆ ತನ್ನ ಮಕ್ಕಳನ್ನು ಅಪ್ಪಿಕೊಳ್ಳುತ್ತಾಳೆ ಮತ್ತು ಒಪ್ಪಿಕೊಳ್ಳುತ್ತಾಳೆ. ಅದಕ್ಕೆ ನಗರದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.
ಗ್ಯಾಂಗ್ರಿನ್ನಿಂದ ಅನಾರೋಗ್ಯಕ್ಕೊಳಗಾಗಿರುವ ವೃದ್ಧೆ ದಾಕ್ಷಾಯಣಮ್ಮ ಎಂಬುವರು ನಗರದ ಜವಾಹರ ರಸ್ತೆ ಬಳಿ ಇರುವ ಬಂಡಿ ದುರ್ಗಾದೇವಿ ದೇವಸ್ಥಾನ ಪ್ರದೇಶದಲ್ಲಿದ್ದಾರೆ. ಅವರನ್ನು ಮಕ್ಕಳು ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಮಕ್ಕಳು ಹೊರಹಾಕಿದ್ದರಿಂದ ಒಂದು ವಾರ ಕಾಲ ದೇವಸ್ಥಾನದಲ್ಲಿ ನೆರೆಹೊರೆಯವರು ನೀಡಿದ ಆಹಾರ ತಿಂದು ಬದುಕು ಸಾಗಿಸಿದ್ದರು ಈ ವೃದ್ಧೆ.
ಸ್ಥಳೀಯರ ನೆರವಿನಿಂದ ಹೂವಿನಾಳ ರಸ್ತೆಯಲ್ಲಿರುವ ಸುರಭಿ ವೃದ್ಧಾಶ್ರಮಕ್ಕೆ ಇವರನ್ನು ಕರೆದುಕೊಂಡು ಹೋಗಲಾಗಿತ್ತು. ವೃದ್ಧಾಶ್ರಮಕ್ಕೆ ಬಂದ ಆ ವೃದ್ಧೆ ತನ್ನನ್ನು ತಮ್ಮ ಮಕ್ಕಳ ಬಳಿಗೆ ವಾಪಸ್ ಕರೆದುಕೊಂಡು ಹೋಗುವಂತೆ ಹಂಬಲಿಸಿದ್ದರು. ಅಷ್ಟೆ ಅಲ್ಲದೆ ತನ್ನ ಮಕ್ಕಳು ತನ್ನನ್ನು ಮನೆಯಿಂದ ಹೊರಹಾಕಿಲ್ಲ. ತಾನೇ ಸ್ವತಃ ದೇವಸ್ಥಾನದಲ್ಲಿ ಇರುವುದಾಗಿ ಹೇಳಿದ್ದರಿಂದ ಮಕ್ಕಳು ದೇವಸ್ಥಾನದಲ್ಲಿ ಬಿಟ್ಟಿದ್ದರು. ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ನಾವೇ ಪೂಜೆ ಮಾಡುವುದರಿಂದ ಸೇವೆ ಮಾಡಿಕೊಂಡು ಅಲ್ಲಿಯೇ ಇರುವುದಾಗಿ ಹೇಳಿದೆ. ಹೀಗಾಗಿ ನನ್ನನ್ನು ನನ್ನ ಮಕ್ಕಳು ದೇವಸ್ಥಾನದಲ್ಲಿ ಬಿಟ್ಟಿದ್ದರು. ಅವರದೇನೂ ತಪ್ಪಿಲ್ಲ ಎಂದು ಮಕ್ಕಳು ಮಾಡಿದ ತಪ್ಪನ್ನು ವೃದ್ಧೆ ದಾಕ್ಷಾಯಣಮ್ಮ ಮರೆಮಾಚುತ್ತಿದ್ದಾರೆ.
ವೃದ್ಧೆಯನ್ನು ಆಕೆಯ ಮಕ್ಕಳು ಮನೆಯಿಂದ ಹೊರಹಾಕಿರುವುದು ನಿಜ ಅಂತಾ ಆ ಪ್ರದೇಶದಲ್ಲಿರುವ ಜನರು ಹೇಳುತ್ತಾರೆ. ಆದರೆ ಮಕ್ಕಳ ಮೇಲಿನ ಕರುಣೆ, ತಾಯಿ ಹೃದಯ ಮಾತ್ರ ಅದನ್ನು ಒಪ್ಪುತ್ತಿಲ್ಲ. ಅವರೇನೂ ತಪ್ಪು ಮಾಡಿಲ್ಲ, ನನ್ನಿಚ್ಛೆಯಂತೆ ಅವರು ನನ್ನನ್ನು ದೇವಸ್ಥಾನದಲ್ಲಿ ಬಿಟ್ಟರು ಎಂದು ದಾಕ್ಷಾಯಣಮ್ಮ ಹೇಳುತ್ತಿದ್ದಾರೆ.