ಕುಷ್ಟಗಿ (ಕೊಪ್ಪಳ) : ಶಾಲೆಗೆ ಗೈರಾಗಿ ಸಾರ್ವಜನಿಕ ಸ್ಥಳದಲ್ಲಿ ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕುಷ್ಟಗಿ ಬಸ್ ನಿಲ್ದಾಣ ಬಳಿ ಮದ್ಯ ಸೇವಿಸಿ ತೂರಾಡಿ, ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು.
ಸ್ಥಳೀಯರ ಸಹಾಯದಿಂದ 108 (ಆ್ಯಂಬುಲೆನ್ಸ್) ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರೂ ಇವರು ಚಿಕಿತ್ಸೆ ನಿರಾಕರಿಸಿ ನಿರ್ಗಮಿಸಿದ್ದರು. ಈ ಪ್ರಕರಣ ಆಧರಿಸಿ ಶಿಕ್ಷಕನಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ಸ್ವೀಕರಿಸಿರಲಿಲ್ಲ. ಅಷ್ಟೇ ಅಲ್ಲ ಶಾಲೆಗೂ ಹಾಜರಾಗಿರಲಿಲ್ಲ. ಇದೀಗ ಕೃಷ್ಣೇಗೌಡ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಮಾನತುಗೊಂಡಿರುವ ಶಿಕ್ಷಕ ಜೀವನಾಂಶ ಪಡೆಯಲು ಅರ್ಹನಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಶಿಕ್ಷಕನ ಅವಾಂತರವೇನು?: ಮೂಲತಃ ಹಾಸನ ಜಿಲ್ಲೆಯವರಾದ ಕೃಷ್ಣೇಗೌಡ, ಹಲವು ವರ್ಷಗಳ ಹಿಂದೆಯೇ ಚಿಕ್ಕನಂದಿಹಾಳ ಶಾಲೆಗೆ ವರ್ಗಾವಣೆಗೊಂಡಿದ್ದರು. ಇವರನ್ನು ಕಳೆದೊಂದು ವರ್ಷದ ಹಿಂದೆ ಕುಷ್ಟಗಿ ತಾಲ್ಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜಿಸಲಾಗಿತ್ತು. ಆದರೆ ಕುಡಿತದಿಂದ ಕರ್ತವ್ಯ ಮರೆತ ಶಿಕ್ಷಕ ಮಧ್ಯಾಹ್ನದ ಹೊತ್ತಲ್ಲೇ ಕುಷ್ಟಗಿ ಬಸ್ ನಿಲ್ದಾಣದ ಹತ್ತಿರ ಕಂಠಪೂರ್ತಿ ಕುಡಿದು ತೂರಾಡುತ್ತಿದ್ದರು. ಅಲ್ಲದೇ ಅಮಲಿನಲ್ಲಿ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದರು.
ಇದನ್ನು ಗಮನಿಸಿದ್ದ ಸ್ಥಳೀಯರು ತಕ್ಷಣವೇ ಆ್ಯಂಬ್ಯುಲೆನ್ಸ್‌ಗೆ ಫೋನ್ ಕರೆ ಮಾಡಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಹೀಗಿದ್ದರೂ ರಂಪಾಟ ಬಿಡದ ಶಿಕ್ಷಕ ಆಸ್ಪತ್ರೆಯ ಆರೋಗ್ಯ ಸಹಾಯಕರಿಗೆ ಚಿಕಿತ್ಸೆ ನೀಡಲು ಸಹಕರಿಸಿರಲಿಲ್ಲ. ಆದರೂ ಹರಸಾಹಸಪಟ್ಟು ಆರೋಗ್ಯ ಸಹಾಯಕರು ಚಿಕಿತ್ಸೆ ನೀಡಿದ್ದರು. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿ ಶಿಕ್ಷಕನ ದುರ್ನಡತೆ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಶಾಲೆಗೆ ಗೈರು...ಬಾರ್ ಗೆ ಹಾಜರು...ಶಿಕ್ಷಕನ ಕರ್ತವ್ಯಲೋಪ