ಕುಷ್ಟಗಿ/ಕೊಪ್ಪಳ: ರಸಗೊಬ್ಬರ ಮಾರಾಟ ನಿಯಮಾವಳಿ ಉಲ್ಲಂಘಿಸಿದ ಹಿನ್ನೆಲೆ ಕುಷ್ಟಗಿಯ ಬಸವೇಶ್ವರ ವೃತ್ತದ ರಸಗೊಬ್ಬರ ಮಾರಾಟಗಾರರಾದ ಮೆಸರ್ಸ್ ಪಿ.ಎ. ಕಾಳಗಿಯವರ ಮಾರಾಟ ಪರವಾನಿಗೆಯನ್ನು 20 ದಿನ ರದ್ದು ಮಾಡಲಾಗಿದೆ.
ಕಳೆದ ಸೋಮವಾರ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ಮೆಸರ್ಸ್ ಪಿ.ಎ.ಕಾಳಗಿ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆ ರಸ ಗೊಬ್ಬರ (ನಿಯಂತ್ರಣ) ಆದೇಶ 1985 ನಿಯಮದನ್ವಯ 20 ದಿನಗಳ ಮಾರಾಟದ ಪರವಾನಿಗೆ ಅಮಾನತಿನ ನೋಟಿಸ್ ಜಾರಿ ಮಾಡಲಾಗಿದೆ.
ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ್ ಮಾಹಿತಿ ನೀಡಿದ್ದಾರೆ.