ಗಂಗಾವತಿ (ಕೊಪ್ಪಳ):ಕಾರಟಗಿ ಪಟ್ಟಣದಲ್ಲಿ ನವ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಇದೀಗ ಮರ್ಯಾದಾ ಹತ್ಯೆಯೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ಕೆಳ ಸಮುದಾಯದ ಯುವಕನನ್ನು ಮೇಲ್ವರ್ಗದ ಮಹಿಳೆ ಪ್ರೀತಿಸಿ ಮದುವೆ ಆಗಿದ್ದು, ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮದುವೆಗೆ ಮಹಿಳೆಯ ಮನೆಯಲ್ಲಿ ತೀವ್ರ ವಿರೋಧ ಇತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಮೃತಳ ಸಹೋದರನೇ ಈ ದಂಪತಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದು, ಈ ಮೂಲಕ ಇದೊಂದು ಮರ್ಯಾದಾ ಹತ್ಯೆ ಎಂಬುದು ಬಹುತೇಕ ದೃಢವಾಗಿದೆ.
ಪ್ರಕರಣದ ಹಿನ್ನೆಲೆ:
ಮೃತ ತ್ರಿವೇಣಿ ಮತ್ತು ಪತಿ ವಿನೋದ್ ಮುಧೋಳದ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇಬ್ಬರ ನಡುವೆ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ಆ ಬಳಿಕ ಪ್ರೀತಿಗೆ ತಿರುಗಿದೆ. ಹೊಸ ಜೀವನಕಂಡುಕೊಳ್ಳುವ ಉದ್ದೇಶಕ್ಕೆ ವಿನೋದ್ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಪಡೆದುಕೊಂಡು ಕಾರಟಗಿ ಶಾಖೆಯ ಉಪ ವ್ಯವಸ್ಥಾಪಕನಾಗಿ ವರ್ಗವಾಗಿದ್ದರು. ತ್ರಿವೇಣಿ ಸಹ, ಸಿರಗುಪ್ಪದ ಸಹಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ 31 ವರ್ಷದ ವಿನೋದ್ ತನಗಿಂತ ವಯಸ್ಸಿನಲ್ಲಿ ಹಿರಿಯಳಾಗಿದ್ದ 34 ವರ್ಷದ ತ್ರಿವೇಣಿಯನ್ನು 6 ತಿಂಗಳ ಹಿಂದೆ ಮದುವೆಯಾಗಿದ್ದ. ಅಂತರ್ಜಾತಿ ಎನ್ನುವ ಕಾರಣಕ್ಕೆ ತ್ರಿವೇಣಿ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಕಳೆದ ಮಾರ್ಚ್ನಲ್ಲಿ ಗಂಗಾವತಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ರಿಜಿಸ್ಟರ್ ಮಾಡಿಸಿಕೊಂಡಿದ್ದ ಈ ನವ ದಂಪತಿ ನಂತರ ತಮ್ಮ ಅಕ್ಕಪಕ್ಕದ ನಿವಾಸಿಗಳ ಸಹಕಾರದೊಂದಿಗೆ ಕಾರಟಗಿ ಸಮೀಪದ ಮರ‍್ಲಾನಹಳ್ಳಿಯ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಕೆಲಸ ಪಡೆದು ಇಬ್ಬರೂ ಸುಖ ದಾಂಪತ್ಯ ಜೀವನ ಆರಂಭಿಸಿದ್ದರು.
ಈ ಮಧ್ಯೆ ಇದೇ ಶನಿವಾರ ತ್ರಿವೇಣಿ ಸಹೋದರ ಮುಧೋಳ ತಾಲೂಕು ಕಾಕನಕಟ್ಟೆ ಗ್ರಾಮದ ಅವಿನಾಶ (27), ಸಹೋದರ ಸಂಬಂಧಿ ಕುಮಾರ ಮತ್ತು ತನ್ನ ಒಬ್ಬ ಸ್ನೇಹಿತನೊಂದಿಗೆ ಸೇರಿ ತ್ರಿವೇಣಿ ದಂಪತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ವಿನೋದ್ ಗಂಭೀರವಾಗಿ ಗಾಯಗೊಂಡಿದ್ದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೀಗ ಮೃತ ತ್ರಿವೇಣಿ ಸಹೋದರನೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಬಹುತೇಕ ದೃಢಪಡಿಸಿದ್ದು, ಅವಿನಾಶನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.