ಕೊಪ್ಪಳ: ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ. ವ್ಯವಹಾರಿಕವಾಗಿ ಬರುತ್ತಾರೆ, ವ್ಯವಹಾರಿಕವಾಗಿ ದೇಶವನ್ನು ಹಾಳು ಮಾಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ನಾನು ರಾಜಕೀಯವಾಗಿ ಒಂದು ಹೊಸ ಹೆಜ್ಜೆ ಇಟ್ಟಿದ್ದೇನೆ. ಸ್ವಂತ ಶಕ್ತಿ, ಸ್ವಂತ ಚಿಂತನೆ ಹಾಗೂ ಅನೇಕರ ಅಭಿಪ್ರಾಯದ ಮೇಲೆ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಮಾಡಿ ಅಧಿಕೃತವಾಗಿ ಪಕ್ಷ ಸೇರುವುದು ನನ್ನ ಆಸೆಯಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹ ಅದನ್ನೇ ಹೇಳಿದ್ದರು. ಆದರೆ, ಕೋವಿಡ್ ನಿಯಮದ ಹಿನ್ನೆಲೆ ದೊಡ್ಡ ಕಾರ್ಯಕ್ರಮ ಮಾಡಿಲ್ಲ. ಈಗಾಗಲೇ ನಾನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದು, ಕಾರ್ಯಕರ್ತನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ನಲ್ಲಿ ಗೊಂದಲವಿದೆ ಎಂದು ನಾನು ಭಾವಿಸುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಬ್ಬರೂ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದು ದುರಂತ. ಯಡಿಯೂರಪ್ಪ ಅವರನ್ನು ಯಾಕೆ ಸಿಎಂ ಸ್ಥಾನದಿಂದ ತೆಗೆಯುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಅದನ್ನು ನಾನು ಮತ್ತೆ ಪುನರುಚ್ಛರಿಸುವುದು ಸರಿಯಲ್ಲ. ಸ್ವಾಮೀಜಿಗಳ ವಿಚಾರದ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ಆದರೆ ಎಲ್ಲಾ ಸ್ವಾಮೀಜಿಗಳಿಗೆ ಗೌರವ ನೀಡುತ್ತೇನೆ. ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ. ಯಾವಾಗ ಚುನಾವಣೆ ಬರುತ್ತದೆಯೋ ಆಗ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎಂಬುದು ಜನರ ಮನಸಿನಲ್ಲಿದೆ. ಅದನ್ನು ಬದಲಾಯಿಸಲು ಆಗುವುದಿಲ್ಲ. ಬಿಜೆಪಿ ಎಲ್ಲಾ ಸಮುದಾಯಗಳಿಗೆ ನ್ಯಾಯ ನೀಡುತ್ತಿಲ್ಲ. ನನಗೆ ನನ್ನ ಸಮಾಜವಷ್ಟೇ ಉಳಿದೆಲ್ಲಾ ಸಮಾಜಗಳ ಬಗ್ಗೆ ಗೌರವವಿದೆ ಎಂದಿದ್ದಾರೆ.
ಓದಿ: ಜನಪರ ಕೆಲಸ ಮಾಡುವ ಗುಣ ಬಿಎಸ್ವೈ ರಕ್ತದಲ್ಲೇ ಇದೆ: ಆರ್. ಅಶೋಕ್