ಗಂಗಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದರು. ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಪತ್ನಿ ಪಲ್ಲವಿ ಸಮೇತ ಆಗಮಿಸಿ, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಂದುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹಿಂದೂಗಳನ್ನು ಹತ್ತಿಕ್ಕುವ ಕೆಲಸವೇ ಕಾಂಗ್ರೆಸ್ ಪಕ್ಷದ ಮುಖ್ಯ ಅಜೆಂಡಾ ಆಗಿದೆ ಎಂದು ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಮುಖಂಡ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ, ಬಿಜೆಪಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದರು.
ಆಮಂತ್ರಣದ ರಾಜಕೀಯ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯವಾಗಿದೆ. ಕಾಂಗ್ರೆಸ್ನ ಯಾವೊಬ್ಬ ನಾಯಕರಿಗೂ ರಾಮಮಂದಿರ ಬೇಕಿಲ್ಲ. ಆದರೆ, ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ನನಗೆ ಗೊತ್ತಿರುವ ಮಟ್ಟಿಗೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲ ರಾಜ್ಯದ ಸಿಎಂಗಳಿಗೂ ಆಹ್ವಾನ ನೀಡಲಾಗಿದೆ. ಆದರೆ, ನನಗೆ ಆಹ್ವಾನ ಬಂದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಪಕ್ಷದ ಅಗ್ರ ನಾಯಕಿ ಸೋನಿಯಾ ಗಾಂಧಿಗೆ ಆಹ್ವಾನ ಇದ್ದರೆ ಪಕ್ಷದ ಎಲ್ಲರಿಗೂ ಆಹ್ವಾನ ನೀಡಿದಂತಲ್ಲವೆ ಎಂದು ಅವರು ಪ್ರಶ್ನಿಸಿದರು.
ನಾವು ಹಿಂದೂಗಳಾಗಿದ್ದು, ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ದೇಣಿಗೆ ಕೊಟ್ಟಿದ್ದೇನೆ ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ದಾನ-ಧರ್ಮದ ಕಾರ್ಯಕ್ಕೆ ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಆದರೆ ಇದನ್ನೂ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ ಬಾಯಲ್ಲಿ ಹಿಂದುತ್ವ ಹಾಗೂ ಹನುಮನ ಭಕ್ತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇವರೊಬ್ಬ ಡೋಂಗಿ ರಾಜಕಾರಣಿ ಎಂದು ಸಿಟಿ ರವಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ: ಡಿಸಿಎಂ ಡಿಕೆಶಿ