ಗಂಗಾವತಿ (ಕೊಪ್ಪಳ): ಕರಡಿಯೊಂದು ಜನವಸತಿ ಪ್ರದೇಶಕ್ಕೆ ನುಗ್ಗಿ ಹಲವರನ್ನು ಗಾಯಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೊಟ್ಟೂರೇಶ್ವರ ಕ್ಯಾಂಪಿನ ಬಳಿಗಾರ ಓಣಿಯಲ್ಲಿ ಈಶ್ವರಮ್ಮ ಹಾಗೂ ನಂದಾಬಾಯಿ ಎಂಬವರು ಗಾಯಗೊಂಡಿದ್ದಾರೆ.
ನಗರಸಭೆಯ ಪೌರಕಾರ್ಮಿಕ ಕಾಸೀಂಸಾಬ ಎಂಬುವವರ ಮೇಲೂ ದಾಳಿ ಮಾಡಿದ್ದು, ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದಂತೆಯೇ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಮೊದಲ ಬಾರಿಗೆ ನಗರದ ಜನನಿಬಿಡ ಹಾಗೂ ಜನವಸತಿ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ಹೊರಟವರು, ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೊರಟವರು ಘಟನೆಯಿಂದ ಭಯಭೀತರಾಗಿದ್ದಾರೆ.
ಬೆಳಗ್ಗೆ ಐದೂವರೆ ಗಂಟೆಗೆ ಈ ಘಟನೆ ನಡೆದಿದ್ದು, ಕರಡಿ ಕಂಡ ತಕ್ಷಣ ಕೋತಿಗಳು ಮರವೆನ್ನೇರಿ ಕೂಗಾಡ ತೊಡಗಿದವು. ನಾಯಿಗಳು ಬೊಗಳುವುದನ್ನು ಕಂಡು ಜನರು ಮನೆಯಿಂದ ಹೊರಗೆ ಬಂದು ನೋಡಿದಾಗ ಕರಡಿ ಓಡುತ್ತಿರುವುದು ಕಂಡುಬಂದಿದೆ.
''ನೀಲಕಂಠೇಶ್ವರ ಕ್ಯಾಂಪಿನ ಭಾಗದಿಂದ ಬಂದ ಕರಡಿ ಜನ ನೋಡನೋಡುತ್ತಿದ್ದಂತೆಯೇ ಹಳೆಯ ಪ್ರವಾಸಿ ಮಂದಿರದ ಗೋಡೆ ಜಿಗಿದು ಪಕ್ಕದ ಬೆಟ್ಟದತ್ತ ಓಡಿ ಹೋಯಿತು'' ಎಂದು ಪ್ರತ್ಯಕ್ಷದರ್ಶಿ ಬಸ್ ನಿಲ್ದಾಣ ಸಮೀಪದ ಇಡ್ಲಿಮನೆ ಹೊಟೇಲ್ ಮಾಲಿಕ ಎಚ್.ಗಣೇಶ್ ತಿಳಿಸಿದರು.