ಕೊಪ್ಪಳ: ಎಸ್ಡಿಪಿಐ ಹಾಗೂ ಆರ್ಎಸ್ಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೊಂಬಿ, ಗಲಾಟೆ ಮಾಡುವ ಯಾವುದೇ ಸಂಘಟನೆಯಾಗಿರಲಿ ಅದನ್ನು ನಿಷೇಧಿಸಬೇಕು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಒತ್ತಾಯಿಸಿದ್ದಾರೆ.
ಈ ಹಿಂದೆ ಗಂಗಾವತಿಯಲ್ಲಿ ಹನುಮಮಾಲಾ ನಿಮಜ್ಜನೆ ಸಂದರ್ಭದಲ್ಲಿ ಆರ್ಎಸ್ಎಸ್ ಸಂಘಟನೆಯವರು ಶಸ್ತ್ರಾಸ್ತ್ರ ಹಿಡಿದುಕೊಂಡು ಓಡಾಡಿದರು. ಆಗ ನಮ್ಮ ಸರ್ಕಾರವಿತ್ತು. ಅವರ ಮೇಲೆ ಪ್ರಕರಣ ದಾಖಲಿಸಿದ್ದೆವು. ಈಗ ಸರ್ಕಾರ ಎಸ್ಡಿಪಿಐಪಿ, ಪಿಎಫ್ಐ ಸಂಘಟನೆ ನಿಷೇಧಿಸಲು ಹೊರಟಿದೆ. ಅವುಗಳ ಜೊತೆಗೆ ಆರ್ಎಸ್ಎಸ್ ಕೂಡ ಬ್ಯಾನ್ ಮಾಡಬೇಕು ಎಂದರು.
ಮಾಜಿ ಸಿಎಂ ದಿವಂಗತ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಹಾರ ಹಾಕುವ ಅರ್ಹತೆಯೂ ಬಿಜೆಪಿಯವರಿಗಿಲ್ಲ. ಅವರು ಮಾಡಿರುವ ಒಳ್ಳೆಯ ಕಾನೂನುಗಳಿಗೆ ಬಿಜೆಪಿ ಸರ್ಕಾರ ತದ್ವಿವಿರುದ್ಧದ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಅರಸು ಹೆಸರಿನ ಪ್ರಶಸ್ತಿಯನ್ನು ಸರ್ಕಾರ ನೀಡುತ್ತಿಲ್ಲ. ಬಿಜೆಪಿಯವರದು ಕೇವಲ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅನ್ಯಾಯ ಅನುಭವಿಸುವವರ ಪರವಾಗಿ ಕಾಂಗ್ರೆಸ್ ನಿಲ್ಲುತ್ತದೆ. ಒಬ್ಬ ಶಾಸಕನಿಗೆ ರಕ್ಷಣೆ ನೀಡದ ಬಿಜೆಪಿ ಸರ್ಕಾರ, ಇನ್ನು ಜನರನ್ನು ಹೇಗೆ ರಕ್ಷಿಸುತ್ತದೆ?. ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಬೆಂಗಳೂರಿನ ಪ್ರಕರಣದ ಸಂದರ್ಭದಲ್ಲಿ ಪೊಲೀಸರು ಎಲ್ಲಿ ಹೋಗಿದ್ದರು? ಸರ್ಕಾರ ಏನು ಮಾಡುತ್ತಿತ್ತು? ಏಕಾಏಕಿ ಸಾವಿರಾರು ಜನ ಸೇರುತ್ತಾರೆ ಎಂದರೆ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.