ಗಂಗಾವತಿ: ಕನಕಗಿರಿ ತಾಲೂಕಿನ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯಕ್ಕೆ 12 ಸಾವಿರ ಕೋಟಿ ರೂ.ಮೊತ್ತದ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರ್ಥಿಕ ಅನುಮೋದನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.
ನವಲಿ ಜಲಾಶಯದ ಕುರಿತಂತೆ ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ನಡೆದ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ನವಲಿ ಜಲಾಶಯದ ಬಗ್ಗೆ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
12 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧವಾಗಿದೆ. ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಬಳಸಿಕೊಂಡು ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ನೀರು ಹಂಚಿಕೆ ಅಂತರಾಜ್ಯಕ್ಕೆ ಸಂಬಂಧಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಮೂವರು ಮುಖ್ಯಮಂತ್ರಿಗಳ ಸಮ್ಮುಖದ ಸಭೆಯಲ್ಲಿ ನವಲಿ ಜಲಾಶಯದ ಅನುಷ್ಠಾನದ ಬಗ್ಗೆ ಚರ್ಚಿಸಲಾಗುವುದು. ಈ ಸಂಬಂಧ ಈಗಾಗಲೇ ಅಧಿಕಾರಿಗಳು ತಯಾರಿಯಲ್ಲಿದ್ದಾರೆ ಎಂದು ಶಾಸಕ ಬಸವರಾಜ ದಢೇಸೂಗೂರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಪ್ರಮಾಣದ ಹೂಳು ತುಂಬಿದ್ದು, ಪರ್ಯಾಯವಾಗಿ ನವಲಿ ಬಳಿ 33 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಈ ಮೊದಲು ಯೋಜಿಸಿಸಲಾಗಿತ್ತು. ಆದರೆ ಈಗ ಅದರ ಸಾಮರ್ಥ್ಯವನ್ನು 55 ಟಿಎಂಸಿಗೆ ಹೆಚ್ಚಿಸಲು ಸರ್ಕಾರ ಯೋಜಿಸಿದೆ.
ಜೂ.20ರ ಬಳಿಕ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಕೃಷಿಗೆ ನೀರು:
ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಜೂ.20ರ ಬಳಿಕ 1500 ಕ್ಯೂಸೆಕ್ ನೀರು ಬಿಡಿಸಲಾಗುವುದು ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಹೇಳಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡಿಸುವ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಶಾಸಕ, ಈ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿ, ಎಡದಂಡೆ ವ್ಯಾಪ್ತಿಯಲ್ಲಿನ ರೈತರಿಗೆ ಈ ಬಾರಿಯೂ ಎರಡು ಬೆಳೆ ಬೆಳೆಯಲು ಪೂರಕ ವಾತಾವರಣವಿದ್ದು, ಜೂ. 20ರಿಂದಲೇ ಕೃಷಿ ಚಟುವಟಿಕೆಗೆ ನೀರು ಹರಿಸಿದರೆ ಮುಂದಿನ ಮಾರ್ಚ್ ಅಂತ್ಯದೊಳಗೆ ಎರಡು ಬೆಳೆ ಭತ್ತ ಬೆಳೆಯಲು ಅನುಕೂಲವಾಗಲಿದೆ ಎಂದರು.
ಕಳೆದ ಸುಮಾರು ಒಂದು ದಶಕದಿಂದ ಎಡದಂಡೆ ವ್ಯಾಪ್ತಿಯಲ್ಲಿನ ರೈತರು ಒಂದೇ ಬೆಳೆಗೆ ಸೀಮಿತರಾಗಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸಿದ್ದರು. ಆದರೆ ಕಳೆದ ವರ್ಷ ಎರಡು ಬೆಳೆಗೆ ನೀರು ಬಿಡಲಾಗಿದೆ. ಈ ಬಾರಿಯೂ ಎರಡು ಬೆಳೆಗೆ ಜಲಾಶಯದಿಂದ ನೀರು ಬಿಡಿಸಲಾಗುವುದು. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಅಲ್ಲದೇ ಭತ್ತವನ್ನೆ ಅವಲಂಬಿಸಿರುವ ಗಂಗಾವತಿ, ಕಾರಟಗಿ ಭಾಗದಲ್ಲಿನ ಪೂರಕ ಚಟುವಟಿಕೆಗೆ ವೇಗ ಸಿಗಲಿದ್ದು, ಆರ್ಥಿಕತೆ ವೃದ್ಧಿಯಾಗಲಿದೆ. ಈ ಬಗ್ಗೆ ಸಿಎಂಗೆ ಮನವರಿಕೆ ಮಾಡಿದ ಬಳಿಕ ನೀರು ಬಿಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.