ಕೊಪ್ಪಳ : ಜಿಲ್ಲೆಯ ಕೆಲ ಭಾಗಗಳಲ್ಲಿ ಬ್ಯಾಡಗಿ ಕೆಂಪು ಮೆಣಸಿನಕಾಯಿಯನ್ನು ರೈತರು ಬೆಳೆದಿದ್ದು ಇದೀಗ ಇದಕ್ಕೆ ಬಂಗಾರದ ಬೆಲೆ ಬಂದಿದೆ. ಆದರೆ, ಇಳುವರಿ ಬಾರದ ಹಿನ್ನೆಲೆ ಕೃಷಿಕರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಕೆಲವೊಂದಿಷ್ಟು ಭಾಗ ಹಾಗೂ ಯಲಬುರ್ಗಾ, ಕುಕನೂರು ತಾಲೂಕಿನಲ್ಲಿ ರೈತರು ಬ್ಯಾಡಗಿಯ ಮೆಣಸಿನಕಾಯಿ ಬೆಳೆದಿದ್ದಾರೆ. ಹಣ್ಣಿಗೆ ಬಿಟ್ಟು ಒಣಮೆಣಸಿನ ಕಾಯಿಯನ್ನು ಮಾಡಿದ್ದಾರೆ.
ಬ್ಯಾಡಗಿ ಕೆಂಪು ಒಣಮೆಣಸಿನಕಾಯಿಗೆ ಈಗ ಉತ್ತಮ ಬೆಲೆಯಿದ್ದು, ಕ್ವಿಂಟಾಲ್ಗೆ ಸುಮಾರು 35 ಸಾವಿರ ರೂಪಾಯಿಗೂ ಅಧಿಕ ಬೆಲೆ ಇದೆ. ಆದರೆ, ಈ ವರ್ಷ ಸುರಿದ ಮಳೆಯಿಂದ ಇಳುವರಿ ಬಾರದೆ ಇರೋದು ರೈತರ ಖುಷಿಗೆ ಬ್ರೇಕ್ ಹಾಕಿದೆ.
ಓದಿ: ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ; ಯತ್ನಾಳ್ ಲಗಾಮಿಲ್ಲದ ನಾಲಿಗೆಗೆ ಡಿವಿ ಕಿಡಿ
ಸಾಮಾನ್ಯವಾಗಿ ಪ್ರತಿವರ್ಷ ಒಂದು ಎಕರೆ ಪ್ರದೇಶದಲ್ಲಿ ಏನಿಲ್ಲವೆಂದರೂ ಏಳರಿಂದ ಎಂಟು ಕ್ವಿಂಟಾಲ್ ಮೆಣಸಿನಕಾಯಿ ಇಳುವರಿ ಬರುತ್ತಿತ್ತು. ಆದರೆ, ಈ ವರ್ಷ ಮಳೆ, ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಇಳುವರಿಯಲ್ಲಿ ಬಹಳಷ್ಟು ಕುಂಠಿತವಾಗಿದೆ. ಪ್ರತಿವರ್ಷದಂತೆ ಈ ವರ್ಷವೇನಾದ್ರೂ ಇಳುವರಿ ಬಂದಿದ್ದರೆ ಈಗಿನ ದರಕ್ಕೆ ಮೆಣಸಿನಕಾಯಿ ಬೆಳೆದವರಿಗೆ ಅಧಿಕ ಲಾಭವಾಗುತ್ತಿತ್ತು.
ಬೆಳೆಯ ನಿರ್ವಹಣಾ ವೆಚ್ಚ, ಕಟಾವು ವೆಚ್ಚವೂ ಹೆಚ್ಚಾಗಿದೆ. ಮಳೆಯಿಂದಾಗಿ ಒಂದು ಕಡೆ ಇಳುವರಿ ಕಡಿಮೆಯಾಗಿರುವುದರ ಜೊತೆಗೆ ಮೆಣಸಿನಕಾಯಿಯ ಗುಣಮಟ್ಟವೂ ಕಡಿಮೆಯಾಗಿದೆ. ಇದರಿಂದಾಗಿ ಸಹಜವಾಗಿ ನಮಗೆ ಲಾಭವೂ ದೊರೆತ್ತಿಲ್ಲ.
ಬೆಲೆ ಇದ್ದಾಗ ಇಳುವರಿ ಇರೋದಿಲ್ಲ, ಇಳುವರಿ ಚೆನ್ನಾಗಿ ಬಂದಾಗ ಬೆಲೆ ಇರುವುದಿಲ್ಲ ಅನ್ನೋದು ಸತ್ಯ. ಈ ಬಾರಿ ಮೆಣಸಿನಕಾಯಿಗೆ ಉತ್ತಮ ಬೆಲೆ ಇದ್ದರೂ ಲಾಭದ ನಿರೀಕ್ಷೆ ಮಾಡದಂತಾಗಿದೆ ಎಂದು ರೈತ ವೀರಬಸಪ್ಪ ಮಳಗಿ ಈಟಿವಿ ಭಾರತ್ಗೆ ತಿಳಿಸಿದರು.