ಕುಷ್ಟಗಿ(ಕೊಪ್ಪಳ) : ಈ ಬಾರಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜಯಭೇರಿ ಸಾಧಿಸಲಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಗೆಲ್ಲೋದು ಬಿಜೆಪಿ ಅಭ್ಯರ್ಥಿಯೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಏನೋ ಹೆಚ್ಚು ಕಡಿಮೆಯಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕುಷ್ಟಗಿ ಮಾರ್ಗವಾಗಿ ಇಳಕಲ್ಗೆ ಹೊರಟಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಜು.23 ರಂದು ಕುಷ್ಟಗಿಯಲ್ಲಿ ಯಡಿಯೂರಪ್ಪ ಅವರ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಿಸಿದ ಅವರು, ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ನಿಂದ ಜೆಡಿಎಸ್, ಜೆಡಿಎಸ್ನಿಂದ ಕಾಂಗ್ರೆಸ್ ಹೀಗೆ ಪಕ್ಷ ಬದಲಾಯಿಸಿ ಅವರಿಗೇ ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಚುನಾವಣೆ ಇನ್ನೂ ಏಳೆಂಟು ತಿಂಗಳಿದ್ದು ಅಷ್ಟೊತ್ತಿಗೆ ಯಾವ ಪಕ್ಷದಲ್ಲಿರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಅವರ ಶಕ್ತಿ ಏನೆಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಆದರೆ, ಸಿಎಂ ಇಬ್ರಾಹಿಂರಿಂದ ಯಡಿಯೂರಪ್ಪ ಅವರಾಗಲಿ, ನಾನಾಗಲಿ, ಬಿಜೆಪಿಯಾಗಲಿ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳೀಕೇರಿ, ಅಮರೇಶ ಕರಡಿ, ನವೀನ್ ಗುಳಗಣ್ಣನವರ್, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪ್ರಭುಶಂಕರಗೌಡ ಪಾಟೀಲ, ಕಲ್ಲೇಶ ತಾಳದ್ ಮತ್ತಿತರರಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದಲ್ಲಿದ್ದರೂ ನನ್ನ ರಾಜಕೀಯ ಗುರು ದೇವೇಗೌಡರು: ಜಮೀರ್ ಅಹ್ಮದ್