ಕೊಪ್ಪಳ: ದೇಶದಲ್ಲಿ ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಯಾತ್ರೆ ಮಾಡ ಹೊರಟಿರುವುದು ವ್ಯರ್ಥ ಕಾರ್ಯ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಕಲ್ಪಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ರಾಹುಲ್ ಗಾಂಧಿ ಅವರೇ ಕರ್ನಾಟಕದಲ್ಲಿ ಯಾತ್ರೆ ಮಾಡಿ ಏನು ಮಾಡುತ್ತೀರಿ? ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲು ಇಲ್ಲಿನವರು ಈಗಾಗಲೇ ತೀರ್ಮಾನಿಸಿದ್ದಾರೆ.
ನಿಮಗೆ ಸಾಮಾಜಿಕ ಕಳಕಳಿ ಇಲ್ಲ. ಹಿಂದುಳಿದವರನ್ನ ತುಳಿಯುತ್ತಲೇ ಬಂದಿದ್ದೀರಿ, ಅಂಬೇಡ್ಕರ್ ಅವರನ್ನ ಸೋಲಿಸಿದವರು ನೀವು. ಅವರು ಸತ್ತಾಗ ಹೂಳಲು ಸಹಕರಿಸದ ನಿಮಗೆ ದಲಿತರ ಮತ ಕೇಳಲು ಯಾವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಬರಲಿ, ಸೋನಿಯಾ ಬರಲಿ ಇನ್ನು ಯಾರೋ ಬರಲಿ. ಬಿಜೆಪಿ ಸೋಲಿಸಲು ಅವರಿಂದ ಸಾಧ್ಯವಿಲ್ಲ. ನಮ್ಮ ಜನ ಬಿಜೆಪಿ ಪಕ್ಷವನ್ನ, ಪ್ರಧಾನಿ ನರೇಂದ್ರ ಮೋದಿಯವರನ್ನ ಬಿಟ್ಟು ಕೊಡುವುದಿಲ್ಲ ಎಂದರು. ವಿಶ್ವ ನಾಯಕ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಾವೆಲ್ಲರೂ ಇರುವುದು ಸೌಭಾಗ್ಯ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗದವರ ಮೀಸಲಾತಿ ಹೆಚ್ಚಿಸಿ ಆದೇಶ ನೀಡಿರುವುದು ಬಿಜೆಪಿ ಸರ್ಕಾರದ ಐತಿಹಾಸಿಕ ಕೆಲಸವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನ ಮನೆ ಮನೆಗೆ ಮುಟ್ಟಿಸಿ ಜನರನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಓದಿ: ಕಾಂಗ್ರೆಸ್ ಗೆಲುವಿನ ಹುಚ್ಚು ಕನಸು ಕೈಬಿಡಿ: ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ