ಕೊಪ್ಪಳ: ಕೆಆರ್ಎಸ್ ಡ್ಯಾಂ ವಿಷಯದಲ್ಲಿ ಒಣ ರಾಜಕೀಯ ಮಾಡಲಾಗುತ್ತಿದೆ. ಈ ರೀತಿಯ ರಾಜಕಾರಣವನ್ನು ಯಾರೂ ಮಾಡಬಾರದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಆರ್ಎಸ್ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ. ಕೆಆರ್ಎಸ್ನಲ್ಲಿ ಬಿರುಕು ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಹಾಗೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಆದರೂ ಈ ವಿಷಯದಲ್ಲಿ ಇಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕೆಆರ್ಎಸ್ ವಿಷಯದಲ್ಲಿ ಏನೋ ಆಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಯಾರಾದರೂ ಆಗಲಿ ಮಾತಿನ ಮೂಲಕ ರಾಜಕಾರಣ ಮಾಡಬಾರದು. ನಮ್ಮ ಕೆಲಸದ ಮೂಲಕ ರಾಜಕಾರಣ ಮಾಡಬೇಕು ಎಂದರು.
ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು ಎಂದು ಈ ಹಿಂದೆಯೇ ಹೇಳಿದ್ದೇನೆ ಎಂದರು. ಇನ್ನು ಅಂಬರೀಷ್ ಸಂಸದರಾಗಿದ್ದಾಗಲೇ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ್, ಅಂಬರೀಷ್ ಅವರು ಈಗ ಇಲ್ಲ. ಅವರ ಹೆಸರನ್ನು ಎಳೆದು ತರಬಾರದು ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಆಡಿಯೋ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾದವರನ್ನೇ ತನಿಖಾಧಿಕಾರಿಯನ್ನಾಗಿ ಮಾಡಲಾಗಿದೆ ಎಂಬ ಆರೋಪದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.