ಕೊಪ್ಪಳ: ಕೆಪಾಸಿಟಿಗೂ ಮೀರಿ ಇನ್ಮುಂದೆ ಆಟೋಗಳಲ್ಲಿ ಪ್ಯಾಸೆಂಜರ್ಗಳನ್ನು ತುಂಬುವಂತಿಲ್ಲ. ಆಟೋಗಳಲ್ಲಿ ಹೆಚ್ಚಿನ ಪ್ಯಾಸೆಂಜರ್ ಹಾಕುವುದಕ್ಕೆ ಕೊಪ್ಪಳದಲ್ಲಿ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಪೊಲೀಸ್ ಇಲಾಖೆಯ ಈ ಕ್ರಮದಿಂದ ಎರಡು ದಿನಗಳಿಂದ ರಸ್ತೆಗಿಳಿಯದಿದ್ದ ಆಟೋಗಳು ನಗರದಲ್ಲಿಂದು ರಸ್ತೆಗಿಳಿದಿವೆ. ಆದರೆ, ಮೊದಲಿನ ದರಕ್ಕಿಂತ ತುಸು ದರವನ್ನು ಹೆಚ್ಚಿಗೆ ಮಾಡಿಕೊಂಡು ರಸ್ತೆಗಿಳಿದಿವೆ.
ಹೌದು, ಜಿಲ್ಲಾ ಕೇಂದ್ರ ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ಯಾಸೆಂಜರ್ ಆಟೋಗಳು ಸೇರಿದಂತೆ ಗೂಡ್ಸ್ ಆಟೋಗಳು ಸಹ ಜನರನ್ನು ಸಾಮರ್ಥ್ಯಕ್ಕೂ ಮೀರಿ ತುಂಬಿಕೊಂಡು ಓಡಾಡುತ್ತಿದ್ದವು. ಶಾಲಾ ಮಕ್ಕಳನ್ನು ಒಂದು ರೀತಿಯಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗುವಂತೆ ಹೋಗುತ್ತಿದ್ದವು. ಇಂತಹ ಅಸುರಕ್ಷಿತ ಸನ್ನಿವೇಶ ನಗರ ಹಾಗೂ ಜಿಲ್ಲೆಯಲ್ಲಿ ಮಾಮೂಲಾಗಿತ್ತು.
ಆದರೀಗ ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಆಟೋಗಳಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಕೆಪಾಸಿಟಿಗಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡು ಓಡಾಡುವ ಆಟೋಗಳ ಮೇಲೆ ಹಾಗೂ ಚಾಲಕರ ಮೇಲೆ ಕ್ರಮ ಕೈಗೊಳ್ಳೋದಾಗಿ ಖಡಕ್ ವಾರ್ನಿಂಗ್ ಮಾಡಿದೆ.
ಜನರ ಹಾಗೂ ಶಾಲಾ ಮಕ್ಕಳನ್ನು ಹಚ್ಚಿನ ಸಂಖ್ಯೆಯಲ್ಲಿ ಆಟೋದಲ್ಲಿ ತುಂಬಿಕೊಂಡು ಹೋಗುವಾಗ ಏನಾದರೂ ಅನಾಹುತ ಸಂಭವಿಸಿದರೆ ಹೇಗೆ ಎಂಬ ನಿಟ್ಟಿನಲ್ಲಿ ಜನರ ಹಾಗೂ ಶಾಲಾ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಟೋಗಳಲ್ಲಿ ಕಳಿಸುವಾಗ ಮಕ್ಕಳ ಪಾಲಕರು ಜವಾಬ್ದಾರಿ ತೋರಬೇಕು. ನಿಯಮದಂತೆ ಪ್ಯಾಸೆಂಜರ್ ಆಟೋಗಳಲ್ಲಿ 3+1 ಮಾತ್ರ ಅವಕಾಶವಿದೆ. ಇದನ್ನು ಪಾಲಿಸಬೇಕು. ಈ ರೂಲ್ಸ್ ಬ್ರೇಕ್ ಮಾಡಿದರೆ ಆಟೋಗಳ ಚಾಲಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆ ಕೈಗೊಂಡ ಈ ಕ್ರಮದಿಂದಾಗಿ ಆಟೋ ಚಾಲಕರು ತಮ್ಮ ಆಟೋಗಳನ್ನು ಎರಡು ದಿನಗಳ ಕಾಲ ರಸ್ತೆಗಿಳಿಸಿರಲಿಲ್ಲ. ಕೊಪ್ಪಳದಲ್ಲಿ ಪ್ರತಿ ಪ್ಯಾಸೆಂಜರ್ಗೆ ಬಸ್ ನಿಲ್ದಾಣದಿಂದ ಮಾರ್ಕೆಟ್ಗೆ ಕರೆದೊಯ್ಯಲು ಏಳು ರೂಪಾಯಿ, ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನದವರೆಗೆ 7 ರೂಪಾಯಿ ಹಾಗೂ ಭಾಗ್ಯನಗರದಿಂದ ಕೊಪ್ಪಳ ಬಸ್ ನಿಲ್ದಾಣದವರೆಗೆ 7 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತೇವೆ. ಈಗ ಆಟೋದಲ್ಲಿ ಕೇವಲ ಮೂರು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕು ಎಂದು ತಾಕೀತು ಮಾಡಿರುವುದರಿಂದ ಒಟ್ಟು 21 ರೂಪಾಯಿ ಮಾತ್ರ ಆಗುತ್ತದೆ.
ಆದರೆ ಎರಡು ತಾಸಿಗೊಮ್ಮೆ ಪಾಳಿ ಬರುತ್ತದೆ. ಹೀಗಾದರೆ ನಮ್ಮ ದಿನದ ದುಡಿಮೆಯ ಗತಿಯೇನು? ಆದರೂ ನಾವು ಕಾನೂನನ್ನು ಪಾಲಿಸುತ್ತೇವೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಈಗ ನಿಗದಿಪಡಿಸಿರುವ ಮೂರು ಜನ ಪ್ಯಾಸೆಂಜರ್ ಬದಲಾಗಿ ಒಂದಿಷ್ಟು ಹೆಚ್ಚಳ ಮಾಡಿ ಕೊಟ್ಟರೆ ಬಡ ಆಟೋ ಚಾಲಕರು ಬದುಕಿಕೊಳ್ಳುತ್ತಾರೆ. ಇಲ್ಲದಿದ್ದರೆ ಇದನ್ನು ಬಿಟ್ಟು ಅನಿವಾರ್ಯವಾಗಿ ಬೇರೆ ಏನಾದರೂ ಮತ್ತೆ ಉದ್ಯೋಗಕ್ಕೆ ಹೋಗಬೇಕು ಎನ್ನುತ್ತಾರೆ ಆಟೋ ಚಾಲಕರು.