ಕೊಪ್ಪಳ: ಮಾಸಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 10 ರಿಂದ ತಮ್ಮ ಕೆಲಸ ಸ್ಥಗಿತಗೊಳಿಸುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಪ್ರಾಣವನ್ನೂ ಲೆಕ್ಕಿಸದೆ ಆರೋಗ್ಯ ಇಲಾಖೆಯ ಜೊತೆಗೆ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರ ನಮಗೆ ಸುರಕ್ಷತೆಯ ಪರಿಕರಗಳನ್ನೂ ಒದಗಿಸಿಲ್ಲ. ಮೂರು ಸಾವಿರ ರೂಪಾಯಿ ಪ್ಯಾಕೇಜ್ ಹಾಗೂ ಎರಡು ತಿಂಗಳು 2 ಸಾವಿರ ರೂಪಾಯಿಯಂತೆ ಹಣ ನೀಡಿದ್ದಾರೆ. ಇದನ್ನು ಬಿಟ್ಟು ಮತ್ತೇನೂ ನಮಗೆ ಬಂದಿಲ್ಲ. ಕೊರೊನಾ ಸಂಬಂಧಿತ ಕೆಲಸ ಮಾಡುವಾಗ ಸುರಕ್ಷತೆಯ ವಸ್ತುಗಳನ್ನು ನೀಡಬೇಕು. ಅಲ್ಲದೆ ಪ್ರತಿ ತಿಂಗಳು 12 ಸಾವಿರ ರೂ, ಗೌರವಧನ ನೀಡಬೇಕು. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ನಾವು ಕೆಲಸ ಸ್ಥಗಿತಗೊಳಿಸುತ್ತಿದ್ದೇವೆ ಎಂದರು.
ಜುಲೈ 10 ರಿಂದ ಈ ಪ್ರಕ್ರಿಯೆ ನಡೆಯಲಿದ್ದು ಬೀದಿಗೆ ಬಂದು ಹೋರಾಟ ಮಾಡುವುದಿಲ್ಲ. ಬದಲಾಗಿ ನಾವು ನಮ್ಮ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಮುಖಂಡ ಶರಣು ಗಡ್ಡಿ ಉಪಸ್ಥಿತರಿದ್ದರು.