ಕುಷ್ಟಗಿ: ಕೋವಿಡ್-19 ಕಾರ್ಯ ನಿಯೋಜನೆ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ವೇತನ ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಉಪ ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು, ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿ ಗ್ರಾಮ, ಪಟ್ಟಣಗಳಲ್ಲಿ ಕೊರೊನಾ ತಡೆಯುವಲ್ಲಿ ಆಶಾ ಕಾರ್ಯಕರ್ತೆಯರು ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಮಾಸಿಕ 12 ಸಾವಿರ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ಸಂಗ್ರಹಿಸುವ ವೇಳೆ ಹಲವು ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆಯಾಗಿದೆ. ಹೀಗಾಗಿ ಹಲ್ಲೆಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ತಕ್ಷಣ ಪರಿಹಾರ ವಿತರಿಸಬೇಕು. ಸೇವಾ ಅವಧಿಯಲ್ಲಿ ಸಾವಿಗೀಡಾದ ಕುಟುಂಬಕ್ಕೆ ವಿಮೆ ಸೌಲಭ್ಯ ಖಾತರಿಪಡಿಸಬೇಕು. ಗುಣಮಟ್ಟದ ಮಾಸ್ಕ್ ಹಾಗೂ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್‌ಗಳನ್ನು ವಿತರಿಸಬೇಕು. ಹಲ್ಲೆ ಮಾಡುವ ವ್ಯಕ್ತಿಗಳಿಗೆ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.