ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ನಲ್ಲಿ ಸಮಸ್ಯೆ ಉದ್ಭವಿಸಿ ನಾಲ್ಕು ದಿನಗಳಾದ್ರೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಲ್ಲಿಗೆ ಯಾಕೆ ಬರುತ್ತಿಲ್ಲ. ಮಾನಸಪುತ್ರ ಎಂದು ಕರೆಸಿಕೊಳ್ಳುತ್ತಿರುವವರು ಯಾಕೆ ಅವರನ್ನು ಇಲ್ಲಿಗೆ ಕರೆತರುತ್ತಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನಿಸಿದ್ದಾರೆ.
ಮುನಿರಾಬಾದ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಕ್ಯಾಟ್ ವಾಕ್ ಮಾಡುವ ರೀತಿಯಲ್ಲಿ ಘಟನಾ ಸ್ಥಳಕ್ಕೆ ಬಂದು ಮಾತನಾಡಿ ಹೋಗುತ್ತಿದ್ದಾರೆ. ಅಧಿಕಾರವಿದ್ದವರು ಸಂಬಂಧಿಸಿದವರ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು. ಆದರೆ ಅವರು ಆ ಕೆಲಸ ಮಾಡುತ್ತಿಲ್ಲ. ಕೇವಲ 30 ಕ್ಯೂಸೆಕ್ ನೀರು ಹರಿಯುವ ಈ ನಾಲೆಯ ರಂದ್ರವನ್ನು ಇವರ ಕೈಯಿಂದ ನಾಲ್ಕು ದಿನವಾದರೂ ಬಂದ್ ಮಾಡಲಾಗುತ್ತಿಲ್ಲ. ಇದೇನು ದೊಡ್ಡ ಸಮಸ್ಯೆಯೇ?, ಸರ್ಕಾರ ಏನು ಮಾಡುತ್ತಿದೆ?, ಸುಮ್ಮನೆ ಮಂತ್ರಿಮಂಡಲ ರಚನೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಎಡದಂಡೆ ನಾಲೆಯ ರೈತರ ಸಂಕಷ್ಟ ಇವರಿಗೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಬಗ್ಗೆ ತೋರಿಸುವ ಗಂಭೀರತೆಯನ್ನು ಸರ್ಕಾರ ತುಂಗಭದ್ರೆಗೆ ತೋರಿಸುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಪ್ರವಾಹ ಹಿನ್ನೆಲೆಯಲ್ಲಿ 50 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಈ ಭಾಗಕ್ಕೆ ಏನೂ ಘೋಷಣೆ ಮಾಡಿಲ್ಲ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿ ಎಂದು ಆರೋಪಿಸಿದರು.