ಕುಷ್ಟಗಿ (ಕೊಪ್ಪಳ): ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಸರ್ಕಾರವಾಗಿದ್ದು, ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಇರುವ ಸರ್ಕಾರವನ್ನು ಕಿತ್ತೊಗೆದು ಅಪರೇಷನ್ ಕಮಲ ಮಾಡಿಯೇ ಅಧಿಕಾರ ಹಿಡಿದಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಕೊಪ್ಪಳ ರಸ್ತೆ ಪಿಸಿಹೆಚ್ ಪ್ಯಾಲೇಸ್ನಲ್ಲಿ ಕುಷ್ಟಗಿ-ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಹಾಗೂ ಯುವ ಕಾಂಗ್ರೆಸ್ ರಾಜ್ಯ ಘಟಕದ ವಕ್ತಾರರಾದ ಲಾಡ್ಲೆಮಷಾಕ್ ದೋಟಿಹಾಳ ಅವರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್ನ 17 ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ತೆಗೆದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಅಪರೇಷನ್ ಮಾಡಿ ಅಧಿಕಾರಕ್ಕೆ ಬರುವಂತೆ ಹೇಳಿದ್ದು, ಬಿಜೆಪಿಗೆ ಅಪರೇಷನ್ ಕಮಲ ಮುಖ್ಯವಾಗಿದೆ. ಕಳೆದ ಗ್ರಾಪಂ ಚುನಾವಣೆಯಲ್ಲಿ 36 ಗ್ರಾಪಂನಲ್ಲಿ 21 ಗ್ರಾಪಂ ಗೆದ್ದಿದ್ದು, ಬಿಜೆಪಿಯವರ ಅಪರೇಷನ್ ಕಮಲದಿಂದಾಗಿ ಕಾಂಗ್ರೆಸ್ 18ಕ್ಕೆ ಕುಸಿದಿದೆ ಎಂದು ದೂರಿದರು.
‘ಸಾಲ ಮಾಡಿ ತುಪ್ಪ ತಿನ್ನು ಅಂತಿದೆ ಕೇಂದ್ರ ಬಿಜೆಪಿ ಸರ್ಕಾರ’
ಕೇಂದ್ರ ಸರ್ಕಾರವು ನಮ್ಮ ರಾಜ್ಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದು, ನಮ್ಮ ಪಾಲಿನ ಜಿಎಸ್ಟಿ ನೀಡದೇ ಸಾಲ ಮಾಡಿ ತುಪ್ಪ ತಿನ್ನು ಎಂದು ಹೇಳುತ್ತಿದೆ. ಸಾಲ ಮಾಡಿದರೆ ರೈತರು ಇರೋ ಹೊಲ ಮಾರಬೇಕಾಗುತ್ತದೆ ಎಂದ ಶಾಸಕ ಬಯ್ಯಾಪೂರ, ಈಗಾಗಲೇ ಬಿಜೆಪಿ ಸರ್ಕರ ಬಿಎಸ್ಎನ್ಎಲ್, ರೈಲ್ವೆ ಮಾರಾಟ ಮಾಡಿದೆ. ಇದೀಗ ಭಾರತೀಯ ರೈಲ್ವೆ ಅದಾನಿ ರೈಲ್ವೆ ಆಗಿದ್ದು, ಈ ರೀತಿಯಾಗಿ ದೇಶವನ್ನೇ ಮಾರಾಟ ಮಾಡಲು ಮುಂದಾಗಿದೆ.
ರೈತರು ಬೆನ್ನೆಲುಬು ಎನ್ನುವ ಸರ್ಕಾರ, ರಾಸಾಯನಿಕ ಗೊಬ್ಬರ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದೆ. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ 58, ಡೀಸೆಲ್ 53 ರೂ. ಪ್ರತಿ ಲೀಟರ್ಗೆ ಇತ್ತು. ಈಗಿನ ಬಿಜೆಪಿ ಸರ್ಕಾರದಲ್ಲಿ ಪೆಟ್ರೋಲ್ 93, ಡೀಸೆಲ್ 83 ರೂ. ಪ್ರತಿ ಲೀಟರ್ಗೆ ಆಗಿದೆ. ಅಡುಗೆ ಅನಿಲ 350 ರೂ. ಇತ್ತು. ಬಿಜೆಪಿಯಲ್ಲೀಗ 850 ರೂ. ಆಗಿದ್ದು, ಇದ್ಯಾವ ಸೀಮೆಯ ಅಚ್ಛೇ ದಿನ್ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಜೆಟ್ ಪೂರ್ವಭಾವಿ ಸಭೆ: ಹನ್ನೆರಡು ಇಲಾಖೆಗಳ ಸಚಿವರ ಜೊತೆ ಸಿಎಂ ಚರ್ಚೆ