ಗಂಗಾವತಿ(ಕೊಪ್ಪಳ): ಆಮಿಷವೊಡ್ಡಿ ಬಲವಂತದ ಮತಾಂತರಕ್ಕೆ ಯತ್ನಿಸಿದ ಆರೋಪ ಪ್ರಕರಣದಲ್ಲಿ ಮತ ಪ್ರಚಾರಕರು ಹಾಗೂ ಪಾದ್ರಿ ಸೇರಿದಂತೆ ಮೂವರ ವಿರುದ್ಧ ಸಂತ್ರಸ್ತ ಕುಟುಂಬದ ಯುವಕ ಕಾರಟಗಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಮನಗರದ ಶಂಕರ್ ಲಕ್ಷ್ಮಣ ಎಂಬುವವರು ಅದೇ ಗ್ರಾಮದ ಪಾದ್ರಿ ಸತ್ಯನಾರಾಯಣ ಸ್ಯಾಮ್ಯುವೆಲ್, ಪ್ರಚಾರಕರಾದ ಶಿವಮ್ಮ ಸತ್ಯನಾರಾಯಣ ಮತ್ತು ಜಿರಂಜೀವಿ ಸತ್ಯನಾರಾಯಣ ಎಂಬುವವರ ವಿರುದ್ಧ ದೂರು ನೀಡಿದ್ದಾರೆ.
ನನಗೆ ಹಣದ ಆಮಿಷವೊಡ್ಡಿ ಬಲವಂತದ ಮತಾಂತರಕ್ಕೆ ಯತ್ನಿಸಿದ್ದಾರೆ. ದೀಕ್ಷೆ ಕೊಟ್ಟು ನೀರಿನಲ್ಲಿ ಮುಳುಗಿಸಿ ಇಂದಿನಿಂದ ನೀನು ಮತ್ತು ನಿನ್ನ ಕುಟುಂಬ ನಮ್ಮ ಧರ್ಮದ ಆರಾಧನೆ ಮಾಡಬೇಕು ಎಂದು ತಿಳಿಸಿ ಹಿಂದು ದೇವರ ಎಲ್ಲಾ ಫೋಟೋಗಳನ್ನು ತೆಗೆಯಿಸಿ ಕಾಲುವೆಗೆ ಎಸೆದಿದ್ದಾರೆ ಎಂಬ ಆರೋಪವನ್ನು ದೂರು ನೀಡಿರುವ ಯುವಕ ಮಾಡಿದ್ದಾರೆ.
ಒಂದೊಮ್ಮೆ ನೀನಾಗಲಿ, ನಿನ್ನ ಕುಟುಂಬವಾಗಲಿ ದೇವರ ಪೂಜೆ ಮಾಡಿದರೆ ಸಾವನ್ನಪ್ಪುತ್ತೀರಿ ಎಂದು ಪಾದ್ರಿ ಭೀತಿ ಹುಟ್ಟಿಸಿದ್ದಾರಂತೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ಗಂಗಾವತಿಯಿಂದ ನಾನು ಕಣಕ್ಕಿಳಿಯುವುದು ನಿಶ್ಚಿತ: ಶಾಸಕ ಪರಣ್ಣ ಮುನವಳ್ಳಿ