ಕೊಪ್ಪಳ: ದುಂಡಾಣು ಅಂಗಮಾರಿ ರೋಗದಿಂದ ದಾಳಿಂಬೆ ಬೆಳೆ ನೆಲಕಚ್ಚಿದ ಮೇಲೆ ಜಿಲ್ಲೆಯಲ್ಲಿ ರೈತರು ಪೇರಲ ಬೆಳೆಯತ್ತ ಮುಖಮಾಡುತ್ತಿದ್ದಾರೆ.
ಅದರಂತೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಗೋಪಾಲರಾವ್ ಕುಲಕರ್ಣಿ ಅವರು ಪೇರಲ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಸುಮಾರು ಎಂಟು ಎಕರೆ ಜಮೀನಿನಲ್ಲಿ ಅಲಹಾಬಾದ್ ಸಫೇದ್ ಹೆಸರಿನ ಪೇರಲ ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಒಂದು ವರ್ಷದಲ್ಲಿಯೇ ಫಲ ನೀಡಲಾರಂಭಿಸಿದೆ.
ಹೀಗಾಗಿ ದಾಳಿಂಬೆ ಬೆಳೆಗಿಂತ ಪೇರಲ ಬೆಳೆಯೇ ಉತ್ತಮವಾಗಿದೆ. ಇದರ ನಿರ್ವಹಣೆಯ ವೆಚ್ಚವೂ ಕಡಿಮೆ. ಹೀಗಾಗಿ ರೈತರು ಪೇರಲ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಈ ತಳಿ ಮತ್ತು ಇಲ್ಲಿನ ಮಣ್ಣಿನ ಗುಣದಿಂದ ಹಣ್ಣು ಅತ್ಯಂತ ಸಿಹಿ ಹಾಗೂ ರುಚಿಕರವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ತಮ್ಮ ಹೊಲದಲ್ಲಿ ಬೆಳೆದಿರುವ ಪೇರಲಕ್ಕೆ ಸಾಕಷ್ಟು ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ನಿರೀಕ್ಷೆ ಇದೆ ಎಂದು ಗೋಪಾಲರಾವ್ ಕುಲಕರ್ಣಿ ಅವರು ತಿಳಿಸಿದ್ದಾರೆ.
ಇನ್ನು ಉತ್ಕೃಷ್ಟ ಗುಣಮಟ್ಟದ ದಾಳಿಂಬೆ ಬೆಳೆಯುತ್ತಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಈಗ ರೈತರು ಪೇರಲ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ದುಂಡಾಣಯ ಅಂಗಮಾರಿ ರೋಗದಿಂದ ಕುಷ್ಟಗಿ ತಾಲೂಕಿನಲ್ಲಿ ದಾಳಿಂಬೆ ಬೆಳೆ ಸಂಪೂರ್ಣ ನೆಲಕಚ್ಚಿದ ಮೇಲೆ ದಾಳಿಂಬೆ ಬೆಳೆಗಾರರು ಪೇರಲ ಬೆಳೆಯಲು ಮುಂದಾಗುತ್ತಿದ್ದಾರೆ.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ನೀಡುವ ಮಾಹಿತಿಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಸದ್ಯಕ್ಕೆ ಸುಮಾರು 700 ರಿಂದ 800 ಹೆಕ್ಟೇರ್ ಪ್ರದೇಶದಲ್ಲಿ ಈಗ ಪೇರಲ ಬೆಳೆ ಇದೆ. ಈ ಪೈಕಿ ಕನಕಗಿರಿ ತಾಲೂಕಿನ ಪಾಲು ಹೆಚ್ಚಿದೆ. ಕುಷ್ಟಗಿ ಭಾಗದಲ್ಲಿ ದಾಳಿಂಬೆ ಬೆಳೆನಾಶವಾದ ಬಳಿಕ ಹೆಚ್ಚಿನ ರೈತರು ಪೇರಲ ಕೃಷಿಯತ್ತ ಮುಖಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.