ಕೊಪ್ಪಳ: ಪೊಲೀಸ್ ಇಲಾಖೆ ನೀಡುವ ವರದಿ ಆಧಾರದ ಮೇಲೆ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಘಟನೆಗೆ ಈ ಎರಡು ಸಂಘಟನೆಗಳೇ ಕಾರಣ. ಅವುಗಳನ್ನು ನಿಷೇಧಿಸದಿದ್ದರೆ ಮತ್ತೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಪೊಲೀಸ್ ಇಲಾಖೆ ವರದಿ ನೀಡಿದರೆ ಮಾತ್ರ ನೀಷೇಧಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖೆಯಲ್ಲಿ ಬಣ್ಣ ಬಯಲಾದರೆ ರಾಮಲಿಂಗಾರೆಡ್ಡಿ ಅಲ್ಲ, ಅಂತಹ ಯಾರೇ ಬಂದರೂ ಆ ಸಂಘಟನೆಗಳನ್ನು ನಿಷೇಧಿಸುತ್ತೇವೆ. ಆದರೆ, ಪೊಲೀಸ್ ಅಧಿಕಾರಿಗಳು ವರದಿ ನೀಡುವವರೆಗೆ ಈ ಕುರಿತು ಮಾತನಾಡುವುದು ಸರಿಯಲ್ಲ. ಅದರಲ್ಲೂ ನಾನು ಕಾನೂನು ಸಚಿವನಾಗಿ ತನಿಖೆಯ ವರದಿಗೂ ಮೊದಲೇ ಮಾತನಾಡುವುದು ಸರಿಯಲ್ಲ ಎಂದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಪಕ್ಷದ ಶಾಸಕ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಲ್ಲಬೇಕಿತ್ತು. ಅದನ್ನು ಬಿಟ್ಟು ವಿನಾಕಾರಣ ನಮ್ಮನ್ನು ಟೀಕಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಕೊಪ್ಪಳ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯಲ್ಲಿ ಅವ್ಯವಹಾರ ನಡೆದ ಕುರಿತು ದೂರು ಬಂದರೆ ತನಿಖೆ ನಡೆಸಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.