ಕುಷ್ಟಗಿ ( ಕೊಪ್ಪಳ): ಕಳೆದ 13 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಜಿಲ್ಲೆಯ ಜುಮಲಾಪುರ ಗ್ರಾಮದ ಯುವಕನೋರ್ವ ಮೇ 28ರಂದು ದಿಢೀರ್ ಪ್ರತ್ಯಕ್ಷನಾಗಿದ್ದಾನೆ. ಕಾಣೆಯಾದ ಮಗನಿಗಾಗಿ ಕಣ್ಣೀರಿನಲ್ಲಿ ಮಿಂದ ಜೀವಗಳಿಗೆ ಮನೆ ಮಗ ಜೀವಂತ ಬಂದಾಗ ಆದ ಖುಷಿಗೆ ಪಾರವೇ ಇರಲಿಲ್ಲ.
ಏನಿದು ಘಟನೆ ?
ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಗುರುಬಸಪ್ಪ ಮಾಸ್ತರ ಹಾಗೂ ಪಾರ್ವತೆಮ್ಮ ದಂಪತಿಯ ಪುತ್ರ ದೇವರಾಜ್ ಪಿಯುಸಿ ಪ್ರಥಮ ವರ್ಷದವರೆಗೆ ವ್ಯಾಸಂಗ ಮಾಡಿದ್ದ. 2008-09ರಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ದೇವರಾಜ್ನ ಪಾಲಕರು ಕೆಲಸಕ್ಕಾಗಿ ಮಂಗಳೂರಿಗೆ ಗುಳೆ ಹೋಗಿದ್ದರು. ಅಪ್ಪ, ಅಮ್ಮ ಮಂಗಳೂರಿಗೆ ಹೋದರೆ, ಇತ್ತ ದೇವರಾಜ್ ಯಾರಿಗೂ ಹೇಳದೆ ಬೆಂಗಳೂರು ದಾರಿ ಹಿಡಿದಿದ್ದ.
ಮನೆಗೆ ಮರಳಿದಾಗ ಮಗ ಕಾಣೆಯಾದ ವಿಷಯ ತಿಳಿದು ಗಾಬರಿಯಾದ ತಂದೆ, ತಾಯಿ ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದರು. ದೇವರಾಜ್ ಮಾತ್ರ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಆ ಬಳಿಕ ದೇವರಾಜ್ ಮನೆ ಕಡೆಗೆ ಬಂದಿದ್ದೇ ಇಲ್ಲ. ಇತ್ತ ಮನೆಯವರು ಮಗ ಎಲ್ಲಿಗೆ ಹೋಗಿದ್ದಾನೆಂದು ತಿಳಿಯದೆ ಕಣ್ಣೀರು ಹಾಕಿ ಕೊನೆಗೆ ಸುಮ್ಮನಾಗಿದ್ದರು.
ಮನೆಗೆ ಮರಳಲು ಕಾರಣವಾದ ಲಾಕ್ಡೌನ್:
2008-09ರಲ್ಲಿ ಮನೆ ಬಿಟ್ಟಿದ್ದ ದೇವರಾಜ್ ಬರೋಬ್ಬರಿ 13 ವರ್ಷಗಳ ಬಳಿಕ ಇದೀಗ ಊರಿಗೆ ಮರಳಿದ್ದಾನೆ. ಲಾಕ್ಡೌನ್ ಕಾರಣ ಕಂಪನಿ ಬಂದ್ ಆಗಿ ಬೆಂಗಳೂರಿನಲ್ಲಿ ಕೆಲಸ ಇಲ್ಲದೆ ದೇವರಾಜ್ ಮನೆ ಕಡೆಗೆ ಬಂದಿದ್ದಾನೆ. ದಶಕದ ಬಳಿಕ ಊರಿಗೆ ಮರಳಿದವ ನೇರವಾಗಿ ತಂದೆ, ತಾಯಿಗೆ ಮುಖ ತೋರಿಸಲಾಗದೆ, ತನ್ನ ಸ್ನೇಹಿತನ ಮನೆ ಯಲಬುರ್ಗಾ ತಾಲೂಕಿನ ತಾಯ ಚಿಕ್ಕವಂಕಲಕುಂಟಕ್ಕೆ ಹೋಗಿದ್ದ. ಅಲ್ಲಿಂದ ಆತನ ಸ್ನೇಹಿತರು ಜುಮಲಾಪುರಕ್ಕೆ ಕರೆ ತಂದು ಬಿಟ್ಟಿದ್ದಾರೆ.
ಜುಮಾಲಾಪುರಕ್ಕೆ ಬಂದ ದೇವರಾಜ್, ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ತಾನು ಇಂತವರ ಮಗನೆಂದು ಹೇಳಿಕೊಂಡಿದ್ದ. ಈತನ ಮಾತು ಕೇಳಿದ ಅಲ್ಲಿದ್ದ ಜನ ಒಂದು ಕ್ಷಣ ದಂಗಾಗಿ ಹೋಗಿದ್ದರು. ಕೂಡಲೇ ಮನೆಯವರಿಗೆ ಸುದ್ದಿ ಮುಟ್ಟಿಸಿದರು. ಮಗ ಮರಳಿದ ವಿಷಯ ಕೇಳಿ ಓಡೋಡಿ ಬಂದ ಹೆತ್ತವರ ಸಂತೊಷಕ್ಕೆ ಪಾರವೇ ಇರಲಿಲ್ಲ. ಮರೆತುಬಿಟ್ಟಿದ್ದ ದೇವರಾಜ್ ಮತ್ತೆ ಮರಳಿದ್ದು, ಕೇವಲ ಆತನ ಹೆತ್ತವರಿಗೆ ಮಾತ್ರವಲ್ಲ ಇಡೀ ಗ್ರಾಮದ ಜನರ ಸಂತೋಷಕ್ಕೆ ಕಾರಣವಾಗಿದೆ.
ನಿಜವಾಯ್ತು ತಾತಾನವರ ಭವಿಷ್ಯ: ಕಾಣೆಯಾದ ಮಗನಿಗಾಗಿ ಹುಡುಕಿ ಹೈರಾಣಾಗಿದ್ದ ದೇವರಾಜ್ ಪೋಷಕರು, ಶ್ರೀಕ್ಷೇತ್ರ ಗುಡದೂರಿನ ದೊಡ್ಡ ಬಸವರ್ಯಾ ತಾತನವರ ಮೊರೆ ಹೋಗಿದ್ದರು. ನಿಮ್ಮ ಮಗನಿಗೆ ಎನೂ ಆಗದು. ಬಂದೇ ಬರ್ತಾನೆ ಎಂದು ಹೆತ್ತವರಿಗೆ ಅವರು ಭವಿಷ್ಯ ನುಡಿದಿದ್ದರು. ಇದೀಗ ಗುಡದೂರಿನ ತಾತನವರ ಭವಿಷ್ಯ ನಿಜವಾಗಿದ್ದು, ಗುಡುದೂರು ಬಸವಾರ್ಯ ತಾತನವರ ಆಶೀರ್ವಾದ ಎಂದು ದೇವರಾಜ್ ಪೋಷಕರು ಹೇಳುತ್ತಿದ್ದಾರೆ.
ಮತ್ತೆ ಹೋಗಲಾರೆ: ಏನೋ ಅರಿಯದೆ ಕುಟುಂಬದಿಂದ ದೂರವಾಗಿದ್ದೆ. ಇದೀಗ ಮತ್ತೆ ಮನೆಯವರನ್ನು ಸೇರಿಕೊಂಡಿದ್ದೇನೆ. ಇನ್ನು ಮುಂದೆ ಇಲ್ಲಿಯೇ ಕೆಲಸ ಮಾಡಿಕೊಂಡು ಇರುವೆ. ಎಲ್ಲಿಗೂ ಹೋಗಲಾರೆ ಎಂದು ದೇವರಾಜ್ ಹೇಳಿದ್ದಾನೆ.
ಓದಿ : ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಇನ್‌ಆಕ್ಟಿವ್ ಆದ ಸಚಿವ ಸುರೇಶ್ ಕುಮಾರ್, ಚಾಮರಾಜನಗರ ಡಿಸಿ