ಗಂಗಾವತಿ: ಇಲ್ಲಿನ ತಾಲೂಕು ಪಂಚಾಯತ್ ಕಾರ್ಯಾಲಯದ ಹಿಂದಿರುವ ಸುಮಾರು ಕಾಲು ಎಕರೆಯಷ್ಟು ಪಾಳು ಬಿದ್ದ ಭೂಮಿಯಲ್ಲೀಗ ಹಸಿರು ಜಗಮಗಿಸುತ್ತಿದ್ದು ನೋಡುಗರ ಮನಸೂರೆಗೊಳ್ಳುವಂತಿದೆ.
ಕಚೇರಿ ಆವರಣದ ಹಿಂದಿನ ಭಾಗದಲ್ಲಿ ಖಾಲಿ ಇರುವ ಭೂಮಿಯಲ್ಲಿ ಹೇಗಾದರೂ ಮಾಡಿ ಹಸಿರು ಚಿಗುರೊಡೆಯುವಂತೆ ಮಾಡಬೇಕೆಂಬ ಹಠದಲ್ಲಿ ತಾಲೂಕು ಪಂಚಾಯಿತಿ ಇಒ, ಮೋಹನ್ ತಮ್ಮ ಸಿಬ್ಬಂದಿಯೊಂದಿಗೆ ನಿತ್ಯ ಬೆಳಗ್ಗೆ ಶ್ರಮದಾನ ಮಾಡಿದ್ದು ಇದೀಗ ಅದರ ಪ್ರತಿಫಲವನ್ನು ಕಾಣುತ್ತಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಆರಂಭಿಸಿದ್ದ ಸಿಬ್ಬಂದಿ ಶ್ರಮದಾನಕ್ಕೆ ತಕ್ಕ ಪ್ರತಿಫಲ ಎಂಬಂತೆ ತಾಲೂಕು ಪಂಚಾಯತ್ ಆವರಣದಲ್ಲಿ ಹಸಿರು ಹೊದ್ದಂತೆ ಇದೀಗ ಉದ್ಯಾನದ ತುಂಬಾ ನಾನಾ ನಮೂನೆಯ ಗಿಡಗಳು, ಪುಷ್ಪ, ಅಲಂಕಾರಿಕಾ ಗಿಡಗಳು ಬೆಳೆದು ನಿಂತು, ಜನರ ಗಮನ ಸೆಳೆಯುತ್ತಿವೆ.