ಕೊಪ್ಪಳ: ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮ ಪಂಚಾಯತ್ನಿಂದ ಕೊರೆಸಿದ್ದ ಕೊಳವೆಬಾವಿಗೆ ಕುಟುಂಬವೊಂದರ ಸದಸ್ಯರು ಕಲ್ಲು-ಮಣ್ಣು ಹಾಕಿ ಮುಚ್ಚಿರುವ ವಿಚಿತ್ರ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಎಂ. ಗುಡದೂರಿನಲ್ಲಿ ನಡೆದಿದೆ.
ನಾಗಪ್ಪ ಸಾರಥಿ ಎಂಬುವರ ಮಕ್ಕಳು ಕೊಳವೆಬಾವಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಪಂಚಾಯತ್ ಕೊರೆಸಿರುವ ಈ ಕೊಳವೆಬಾವಿ ತಮ್ಮ ಜಮೀನಿನಲ್ಲಿದೆ. ಅದು ಸರ್ಕಾರಿ ಜಾಗದಲ್ಲಿ ಇಲ್ಲವೆಂದು ವಾದಿಸಿ ಸಾರಥಿ ಕುಟುಂಬದವರು ಎರಡೂವರೆ ಇಂಚು ನೀರು ಬಿದ್ದಿದ್ದ ಆ ಕೊಳವೆ ಬಾವಿಯನ್ನು ಕಲ್ಲು-ಮಣ್ಣು ಹಾಕಿ ಮುಚ್ಚಿದ್ದಾರೆ.
ರಸ್ತೆ ಪಕ್ಕದಲ್ಲಿರುವ ಕೊಳವೆ ಬಾವಿಯನ್ನು ಕಲ್ಲು-ಮಣ್ಣು ಹಾಕಿ ಮುಚ್ಚುತ್ತಿರುವ ದೃಶ್ಯ 'ಈಟಿವಿ ಭಾರತ' ಕ್ಕೆ ಲಭ್ಯವಾಗಿದೆ. ಈ ಕುರಿತಂತೆ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಕುಷ್ಟಗಿ ತಹಶಿಲ್ದಾರ್ ಕೆ.ಎಂ. ಗುರುಬಸವರಾಜ, ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರಸ್ತೆಯ ಪಕ್ಕದಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು. ಎರಡೂವರೆ ಇಂಚು ನೀರು ಸಹ ಬಿದ್ದಿತ್ತು. ಆ ಕೊಳವೆಬಾವಿ ಸಾರಥಿ ಕುಟುಂಬದ ಜಮೀನಿನಲ್ಲಿ ಇಲ್ಲ. ರಸ್ತೆ ಪಕ್ಕದ ಸರ್ಕಾರಿ ಜಾಗದಲ್ಲಿದೆ. ಹೀಗಿದ್ದಾಗ್ಯೂ ನಾಗಪ್ಪ ಸಾರಥಿ ಅವರ ಇಬ್ಬರು ಮಕ್ಕಳು ಕಲ್ಲು, ಮಣ್ಣು ಹಾಕಿ ಮುಚ್ಚಿದ್ದಾರೆ. ಅವರ ವಿರುದ್ಧ ದೂರು ದಾಖಲಿಸುವಂತೆ ಸಂಬಂಧಿಸಿದ ಪಂಚಾಯತ್ ಪಿಡಿಓಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.