ಕುಷ್ಟಗಿ(ಕೊಪ್ಪಳ): ಅನ್ಯ ಜಾತಿ, ಪಾಲಕರ ವಿರೋಧ ಸಹಿಸದೇ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಬಗ್ಗೆ ಕೇಳಿದ್ದೇವೆ. ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ಒಂದೇ ಜಾತಿ, ಪಾಲಕರ ಸಮ್ಮತಿ ಇದ್ದರೂ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮರೇಶ ಮಾಲಿಪಾಟೀಲ(21), ಯಲ್ಲಮ್ಮ ಗೋನಾಳ (18) ಆತ್ಮಹತ್ಯೆಗೆ ಶರಣಾದವರು. ಮಂಗಳವಾರ ಬೆಳಗ್ಗೆ 11ಕ್ಕೆ ಯಲ್ಲಮ್ಮ ಗೋನಾಳ ಕುಟುಂಬಕ್ಕೆ ಸೇರಿದ ಜನತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡುವ ಮೂಲಕ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಸದರಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಸ್ಥಳೀಯರು ಬಾಗಿಲು ಮುರಿದು ನೇಣಿನ ಹಗ್ಗ ಕತ್ತರಿಸಿ ಈ ಜೋಡಿಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಇಬ್ಬರೂ ಇಹಲೋಕ ತ್ಯಜಿಸಿದ್ದರು. ವಿಷಯ ತಿಳಿದು ತಾವರಗೇರಾ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಪರಿಶೀಲಿಸಿ, ಶವ ಪರೀಕ್ಷೆಗೆ ತಾವರಗೇರಾ ಸಮುದಾಯ ಆಸ್ಪತ್ರೆಗೆ ಇಬ್ಬರ ಮೃತದೇಹಗಳನ್ನು ಸಾಗಿಸಲಾಗಿದೆ.
ಈ ನವ ಜೋಡಿ ಅನ್ಯೋನ್ಯವಾಗಿದ್ದರಿಂದ ವರ್ಷದ ಹಿಂದೆ ಎರಡು ಕುಟುಂಬಗಳ ಪರಸ್ಪರ ಸಮ್ಮತಿ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಮರೇಶ ಮಾಲಿಪಾಟೀಲ, ತಾವರಗೇರಾ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ. ಯಲ್ಲಮ್ಮ ಗೋನಾಳ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಒಂದೇ ಗ್ರಾಮ, ಒಂದೇ ಜಾತಿ, ಮಾವ, ಸೊಸೆ ಸಂಬಂಧಿಯಾಗಿದ್ದರಿಂದ ಪಾಲಕರ ವಿರೋಧ ಇರಲಿಲ್ಲ. ಈ ಜೋಡಿ ಮೇ 23ರಂದು ಅಂಕಲಿಮಠದ ಜಾತ್ರೆಗೂ ಹೋಗಿ ಬಂದಿದ್ದರು. ಆದಾಗ್ಯೂ ಆತ್ಮಹತ್ಯೆ ಮಾಡಿಕೊಂಡಿರುವ ಇವರ ನಡೆ ನಿಗೂಢವಾಗಿದೆ.
ಯಲ್ಲಮ್ಮ ಗೋನಾಳಗೆ 17 ವರ್ಷ 9 ತಿಂಗಳಾಗಿದ್ದು, ಕಾನೂನು ಪ್ರಕಾರ ಮದುವೆಯಾಗುವ ವಯಸ್ಸಿನ ಅರ್ಹತೆ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಪಾಲಕರು ಮದುವೆ ಮುಂದೂಡುವ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ಈ ಜೋಡಿ ಬೇಸರದಲ್ಲಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕುಷ್ಟಗಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಈ ಕುರಿತು ಪ್ರತಿಕ್ರಿಯಿಸಿ, ಒಂದೇ ಸಮುದಾಯ, ಅದೇ ಗ್ರಾಮ ಹಾಗೂ ಪಾಲಕರ ವಿರೋಧ ಇಲ್ಲದಿದ್ದರೂ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜೋಡಿ ಪ್ರತ್ಯೇಕವಾದ ಮನೆಯಲ್ಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವ ಪೂರ್ವದಲ್ಲಿ ಜಗಳ ಮಾಡಿಕೊಂಡಿರಬಹುದು. ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಪರಿಶೀಲಿಸಿದ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ.. ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ!