ಕುಷ್ಟಗಿ: ಲಾಕಡೌನ್ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸರ್ಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ಆಗಿದ್ದ ಕುಷ್ಟಗಿಯ 50, ಯಲಬುರ್ಗದ 19 ಸೇರಿ ಒಟ್ಟು 69 ಜನ ಕಾರ್ಮಿಕರು ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ.
ಉದ್ಯೋಗ ಅರಸಿ ಗುಳೆ ಹೋಗಿದ್ದ ಜನರು ತಮ್ಮೂರಿಗೆ ವಾಪಸಾಗುವ ಸಂದರ್ಭದಲ್ಲಿ ಮೂಡಬಿದಿರೆಯಲ್ಲಿ ಸಿಲುಕಿಕೊಂಡಿದ್ದರು. ಅಲ್ಲಿ ಸರ್ಕಾರಿ ಕಟ್ಟಡವೊಂದರಲ್ಲಿ ಕ್ವಾರಂಟೈನ್ನಲ್ಲಿದ್ದ 69 ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಮೂರು ಬಸ್ಸುಗಳಲ್ಲಿ ಕುಷ್ಟಗಿ ತಾಲೂಕು ಆಸ್ಪತ್ರೆಗೆ ಕರೆ ತರಲಾಗಿದೆ.
ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಿದಾಗ ಯಾರಿಗೂ ಜ್ವರದ ಲಕ್ಷಣ ಕಂಡು ಬರಲಿಲ್ಲ. ಮೂಡಬಿದಿರೆಯಿಂದ ಕುಷ್ಟಗಿಯವರೆಗೆ ಎಲ್ಲಿಯೂ ಊಟ ಸಿಗದ ಹಿನ್ನೆಲೆಯಲ್ಲಿ ಹಸಿವಿನಿಂದ ಬಳಲಿರುವುದನ್ನು ಗಮನಿಸಿದ ತಹಶೀಲ್ದಾರ್ ಎಂ.ಸಿದ್ದೇಶ, ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ನಿರಾಶ್ರಿತರ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಿಸಿದರು.
ನಂತರ ಅವರವರ ಗ್ರಾಮಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು. ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು, ಮೂಡಬಿದಿರೆಯಿಂದ ಆಗಮಿಸಿದ ಎಲ್ಲರೂ ಮನೆಯಲ್ಲಿ ಮಾಸ್ಕ್ ಧರಿಸಿಕೊಂಡಿರಬೇಕು. ಸಾಧ್ಯವಾದಷ್ಟು ಚಿಕ್ಕ ಮಕ್ಕಳಿಂದ ದೂರವಿರಿ. ಜ್ವರ, ಕೆಮ್ಮು ಲಕ್ಷಣ ಕಾಣಿಸಿದಾಗ ಸ್ಥಳೀಯ ಆಶಾ ಕಾರ್ಯಕತೆಯರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಅಂತರ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಿವಿಮಾತು ಹೇಳಿದರು.