ಕೊಪ್ಪಳ: ಕ್ಷಯರೋಗಿಗಳನ್ನು ಪತ್ತೆ ಮಾಡುವಲ್ಲಿ ಮತ್ತು ಅವರಿಗೆ ಚಿಕಿತ್ಸೆಗೊಳಪಡಿಸುವಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿರುವ ಕೊಪ್ಪಳ ಜಿಲ್ಲೆ, ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಆರೋಗ್ಯ ಇಲಾಖೆಯೊಂದಿಗೆ ಖಾಸಗಿ ವೈದ್ಯರು ಸಹ ಕೈಜೋಡಿಸುತ್ತಿದ್ದಾರೆ. ಜಿಲ್ಲೆಯ 7 ಜನ ಖಾಸಗಿ ವೈದ್ಯರು ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಕ್ಷಯರೋಗ ನಿಯಂತ್ರಣ ಮಾಡಲು ಸರ್ಕಾರ ನಾನಾ ಪ್ರಯತ್ನ ಮಾಡುತ್ತಿದೆ. ಆದರೂ ಕ್ಷಯ ರೋಗಿಗಳ ಪತ್ತೆ ಕಾರ್ಯದಿಂದ ಅನೇಕರು ಹೊರಗೆ ಉಳಿಯುತ್ತಿದ್ದಾರೆ. ಪರಿಣಾಮ ಅಂತಹವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಕ್ಷಯರೋಗ ಪತ್ತೆಗೆ ನಾನಾ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದೆ.
ಕ್ಷಯರೋಗ ಪತ್ತೆ ಮತ್ತು ಗುಣಾತ್ಮಕ ಚಿಕಿತ್ಸೆ ಕೊಡಿಸುವಲ್ಲಿ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಖಾಸಗಿ ವೈದ್ಯರ ಸಹಕಾರವೂ ಇದೆ. ಕ್ಷಯರೋಗ ಪತ್ತೆ ಮತ್ತು ಅವರಿಗೆ ಸೂಕ್ತ ಗುಣಾತ್ಮಕ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ಕೊಪ್ಪಳ ಜಿಲ್ಲೆಯಲ್ಲಿ 7 ಜನ ಖಾಸಗಿ ವೈದ್ಯರು ಬರೋಬ್ಬರಿ 52 ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ಕೊಪ್ಪಳದ ವೈದ್ಯ ಡಾ. ಶಿವನಗೌಡ ಪಾಟೀಲ್ ಅವರು 11 ಗ್ರಾಮಗಳು ಹಾಗೂ ಇನ್ನುಳಿದ ವೈದ್ಯರು 41 ಗ್ರಾಮಗಳು ಸೇರಿ ಒಟ್ಟು 52 ಗ್ರಾಮಗಳನ್ನು ದತ್ತು ಪಡೆದುಕೊಂಡಿದ್ದಾರೆ. ದತ್ತು ಪಡೆದಿರುವ ಗ್ರಾಮಗಳಲ್ಲಿ ಕ್ಷಯ ರೋಗದ ಕುರಿತ ಜಾಗೃತಿ ಕಾರ್ಯಕ್ರಮ, ಕ್ಷಯರೋಗ ಪತ್ತೆ ಕಾರ್ಯಕ್ರಮ, ಪತ್ತೆಯಾದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಪೌಷ್ಠಿಕ ಆಹಾರ ವಿತರಣೆಯ ಕೆಲಸ ಮಾಡುತ್ತಿದ್ದಾರೆ.
ಖಾಸಗಿ ವೈದ್ಯರು ದತ್ತು ಪಡೆದ ಗ್ರಾಮಗಳಿಂದ ಈ ಬಾರಿ ಸುಮಾರು 70ಕ್ಕೂ ಕ್ಷಯ ರೋಗಿಗಳು ಪತ್ತೆಯಾಗಿದ್ದಾರೆ. ಅವರನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇದು ಗ್ರಾಮಗಳನ್ನು ದತ್ತು ಪಡೆದ ಖಾಸಗಿ ವೈದ್ಯರು ಸಹಕಾರದಿಂದ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ.
ಡಾ. ಶಿವನಗೌಡ ಪಾಟೀಲ್, "ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಮಾಡುವ ಕುರಿತಂತೆ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ. ಅವರ ಕಾರ್ಯತತ್ಪರತೆಯಿಂದ ಪ್ರೇರಣೆಗೊಂಡು ಗ್ರಾಮಗಳನ್ನು ದತ್ತು ಪಡೆದುಕೊಂಡಿರುವೆ. ದತ್ತು ಪಡೆದ ಗ್ರಾಮಗಳಲ್ಲಿ ಕ್ಷಯರೋಗ ಪತ್ತೆ ಶಿಬಿರ, ಜಾಗೃತಿ ಕಾರ್ಯಕ್ರಮ ಹಾಗೂ ವಾರದಲ್ಲಿ ಎರಡು ದಿನ ಕ್ಣಯ ರೋಗಿಗಳಿಗೆ ಪೌಷ್ಠಿಕ ಆಹಾರವಾದ ಹಾಲು ಮತ್ತು ಮೊಟ್ಟೆಯನ್ನು ಆಶಾ ಕಾರ್ಯಕರ್ತೆಯರ ಮೂಲಕ ವಿತರಿಸುತ್ತಿದ್ದೇನೆ. ಕ್ಷಯರೋಗ ನಿರ್ಮೂಲನೆಯ ಕಾರ್ಯದಲ್ಲಿ ನಮ್ಮದೂ ಒಂದು ಸೇವೆ ಇರಲಿ ಎಂಬ ಸದಾಶಯದಿಂದ 11 ಗ್ರಾಮಗಳನ್ನು ದತ್ತು ಪಡೆದುಕೊಂಡಿರುವೆ" ಎಂದರು.