ಗಂಗಾವತಿ : ಕೇವಲ ನಾಲ್ಕು ಸಾವಿರ ಜನಸಂಖ್ಯೆ ಇರುವ ಸಣ್ಣ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದು, ಇದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಸ್ಥಾನದಲ್ಲಿ ಸಭೆ ಸೇರಿದ ಗ್ರಾಮದ ಮುಖಂಡರು, ಇಂತಿಷ್ಟು ಜನಸಂಖ್ಯೆಗೆ ಇಷ್ಟೇ ಪ್ರಮಾಣದ ಮದ್ಯದಂಗಡಿಗಳು ಇರಬೇಕು ಎಂಬ ನಿಯಮವಿದೆ. ಆದರೆ, ಅಬಕಾರಿ ಇಲಾಖೆ ವೈಫಲ್ಯದಿಂದಾಗಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಅಕ್ರಮ, ಅನಧಿಕೃತ ಮದ್ಯಂಗಡಿಗಳು ತಲೆ ಎತ್ತಿವೆ. ಗ್ರಾಮದ ಓಣಿಗಳಲ್ಲಿ, ಕಿರಾಣಿ ಅಂಗಡಿಗಳಲ್ಲಿ, ಚಹಾ ಮಾರುವ ಹೋಟೆಲ್‌ಗಳಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ.
ಸುಲಭವಾಗಿ ಮದ್ಯ ಕೈ ಸೇರುತ್ತಿರುವ ಪರಿಣಾಮ ಯುವಕರು, ಮಕ್ಕಳು ದಾರಿ ತಪ್ಪುವಂತಾಗಿದೆ ಎಂದು ಸಭೆ ಸೇರಿದ್ದ ಮುಖಂಡರು ಆತಂಕ ವ್ಯಕ್ತಪಡಿಸಿದರು. ಈ ಹಿನ್ನೆಲೆ ಕೂಡಲೇ ಸಂಬಂಧಿತ ಇಲಾಖೆಯ ಗಮನಕ್ಕೆ ತರುವುದು, ಬಳಿಕ ಸಮಯದ ಗಡುವು ನೀಡಿ ಗ್ರಾಮದಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೂ ಮೊದಲು ಶಾಸಕರ ಗಮನಕ್ಕೆ ತರವು ಬಗ್ಗೆಯೂ ಚರ್ಚೆಯಾಯಿತು.