ಕೊಪ್ಪಳ: ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯಲ್ಲಿ ಪ್ರತಿಭೆಗಳಿಗೇನೂ ಕಡಿಮೆ ಇಲ್ಲ. ಆದರೆ ಸೂಕ್ತ ಮಾರ್ಗದರ್ಶನದ, ಸಂಪನ್ಮೂಲದ ಕೊರತೆಯಿಂದ ಈ ಭಾಗದ ಪ್ರತಿಭೆಗಳು ಇತರ ಪ್ರದೇಶದ ವಿದ್ಯಾರ್ಥಿಗಳ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪೈಪೋಟಿ ಮಾಡಲು ಆಗುತ್ತಿಲ್ಲ. ಆದರೆ ಇನ್ಮುಂದೆ ಇಲ್ಲಿನ ವಿದ್ಯಾರ್ಥಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಬೇರೆಲ್ಲೂ ಹೋಗುವ ಅವಶ್ಯಕತೆ ಇಲ್ಲ. ಏಕೆಂದರೆ ಕೊಪ್ಪಳದ ಶ್ರೀ ಗವಿಮಠ 24x7 ಡಿಜಿಟಲ್ ಲೈಬ್ರರಿ ಆರಂಭಿಸಿದೆ.
ಸದಾ ಒಂದಿಲ್ಲೊಂದು ಸಾಮಾಜಿಕ ಕಾಳಜಿಯ, ತನ್ನ ಹೊಣೆಗಾರಿಕೆಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವ ಸುಪ್ರಸಿದ್ಧ ಶ್ರೀ ಗವಿಮಠ ಕಳೆದ ವರ್ಷ ಮಾಡಿದ್ದ ಘೋಷಣೆಯಂತೆ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಿದೆ. ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಆಶಯದೊಂದಿಗೆ ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ಶ್ರೀ ಗವಿಮಠದ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ವಾರದ ಏಳೂ ದಿನವೂ 24 ಗಂಟೆ ತೆರೆದಿರುವ ಡಿಜಿಟಲ್ ಲೈಬ್ರರಿ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಕಟ್ಟಡದಲ್ಲಿ 24x7 ಡಿಜಿಟಲ್ ಲೈಬ್ರರಿ ಪ್ರಾರಂಭಗೊಂಡಿದೆ.
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಈ ಲೈಬ್ರರಿಗೆ ಬರಬಹುದಾಗಿದೆ. ಈ ಡಿಜಿಟಲ್ ಲೈಬ್ರರಿಯಲ್ಲಿ ಈಗಾಗಲೇ 15 ಕಂಪ್ಯೂಟರ್ ಅಳವಡಿಸಲಾಗಿದ್ದು, ಎಲ್ಲ ಅನುಕೂಲ ಕಲ್ಪಿಸಲಾಗಿದೆ. ಅಲ್ಲದೆ 108 ವಿದ್ಯಾರ್ಥಿಗಳು ಕುಳಿತುಕೊಂಡು ಓದಲು ಅನುಕೂಲ ಕಲ್ಪಿಸಲಾಗಿದೆ (ಓಪನ್ ರೀಡಿಂಗ್ ಹಾಲ್). ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬೇಕಾಗಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಡಿಜಿಟಲ್ ಲೈಬ್ರರಿಗೆ ಅಗತ್ಯವಾದ ವೆಬ್ಸೈಟ್, ಇಂಟರ್ನೆಟ್ ಸಂಪರ್ಕ, 25ಕ್ಕೂ ಹೆಚ್ಚು ಮ್ಯಾಗಜಿನ್ ಗಳು, ಜರ್ನಲ್ ಗಳ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವ ಈ ಭಾಗದ ವಿದ್ಯಾರ್ಥಿಗಳಿಗೆ ಈ ಲೈಬ್ರರಿ ಸಾಕಷ್ಟು ಅನುಕೂಲವಾಗಲಿದೆ.
ಗವಿಮಠ ಆರಂಭಿಸಿರುವ ಈ ಡಿಜಿಟಲ್ ಲೈಬ್ರರಿಯಿಂದಾಗಿ ಈ ಭಾಗದ ವಿದ್ಯಾರ್ಥಿಗಳಲ್ಲಿ ಕನಸು ಮತ್ತಷ್ಟು ಗರಿಗೆದರುವಂತೆ ಮಾಡಿದೆ. ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಸರಿಯಾದ ಮಾರ್ಗದರ್ಶನ, ಪರೀಕ್ಷೆ ತಯಾರಿಗೆ ಬೇಕಾದ ಅಗತ್ಯ ಪುಸ್ತಕಗಳ ಅಗತ್ಯವಿರುತ್ತದೆ. ಇಂತಹ ಸೌಲಭ್ಯಗಳು ಈ ಭಾಗದಲ್ಲಿ ಇರಲಿಲ್ಲ. ಈಗ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅನುಕೂಲವಾಗಲಿ ಎಂದು 24x7 ಡಿಜಿಟಲ್ ಲೈಬ್ರರಿ ಪ್ರಾರಂಭಿರುವುದು ನಿಜಕ್ಕೂ ನಮಗೆ ಅನುಕೂಲಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. ಗವಿಮಠದ ಶ್ರೀಗಳ ಈ ಯೋಜನೆ ಮತ್ತು ಯೋಚನೆ ನಿಜಕ್ಕೂ ಪ್ರಶಂಸನೀಯ.
ಓದಿ : ಐದೂವರೆ ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಮಹಿಳೆ.. ಆಸ್ಪತ್ರೆಯಿಂದ 6 ಕೋಟಿ ರೂಪಾಯಿ ಬಿಲ್ ಆರೋಪ