ಕುಷ್ಟಗಿ (ಕೊಪ್ಪಳ): ನಗರದ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಕೆಇಬಿ ಬಳಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಯಾರಿಗೆ ಸೇರಿವೆ ಎಂಬ ವಿಚಾರ ಪುರಸಭೆಯಲ್ಲಿ ಚರ್ಚೆಗೆ ಕಾರಣವಾಯಿತು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ನೇತೃತ್ವದಲ್ಲಿ ನಡೆದ 2021-22ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಭೆಯಲ್ಲಿ ಈ ವಿಷಯದ ಬಗ್ಗೆ ಗಹನವಾದ ಚರ್ಚೆ ನಡೆಯಿತು.
ಸದಸ್ಯ ಕಲ್ಲೇಶ ತಾಳದ ವಿಷಯ ಪ್ರಸ್ತಾಪಿಸಿ ಕೆಇಬಿ ಬಳಿ ಇರುವ ವಾಣಿಜ್ಯ ಮಳಿಗೆ ಹಲವು ವರ್ಷಗಳಿಂದ ಕಡಿಮೆ ಬಾಡಿಗೆಯಲ್ಲಿವೆ. ಈ ಜಾಗ ಪುರಸಭೆ ಆಸ್ತಿ ರಜಿಸ್ಟರ್ನಲ್ಲಿ ಇದುವರೆಗೂ ನಮೂದಾಗಿಲ್ಲ. ಇದರಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳು ಪುರಸಭೆಗೆ ಸಂಬಂಧಿಸಿಲ್ಲ ಎಂದು ಕೋರ್ಟ್ಗೆ ನೀಡಿರುವ ದೂರಿನ ವಿಚಾರ ಗಮನಕ್ಕೆ ತಂದು ಅಚ್ಚರಿ ಮೂಡಿಸಿದರು.
ಇದಕ್ಕೆ ಸದಸ್ಯರಾದ ಖಾಜಾ ಮೈನುದ್ದೀನ ಮುಲ್ಲಾ, ವಸಂತ ಮೇಲಿನಮನಿ, ಮಹಾಂತೇಶ ಕಲ್ಲಭಾವಿ, ಚಿರಂಜೀವಿ ಹಿರೇಮಠ, ರಾಮಣ್ಣ ಬಿನ್ನಾಳ, ಮಹಿಬೂಬು ಕಮ್ಮಾರ, ಬಸವರಾಜ ಬುಡಕುಂಟಿ ಮೊದಲಾದವರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ, ವಾಣಿಜ್ಯ ಮಳಿಗೆ ಜಾಗ ಸರ್ಕಾರದ ಸ್ವಾಧೀನದಲ್ಲಿಲ್ಲ. ಅವು ಮೂಲ ಮಾಲೀಕನ ಹೆಸರಿನಲ್ಲಿವೆ. ಸದರಿ ಜಮೀನು ಮೂಲ ಮಾಲೀಕರಿಂದ ಪುರಸಭೆ ಆಸ್ತಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ.
ಇದನ್ನೂ ಓದಿ: ವೃದ್ಧೆ ಸಾವಿನ ಬಗ್ಗೆ ಅನುಮಾನ: ಹೂತಿಟ್ಟ ಕಳೇಬರ ಹೊರ ತೆಗೆದು ಮಹಜರು