ಕೋಲಾರ: ಮಹಿಳಾ ಮೀಸಲಾತಿ ವಿಚಾರವಾಗಿ ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೇ ಅಂಗೀಕಾರಕ್ಕೆ ಮುಂದಾಗಿದ್ದೆವು. ಆದರೆ ಕೆಲವರ ವಿರೋಧ ಇದ್ದ ಕಾರಣ ಅನುಮೋದನೆ ಸಿಗಲಿಲ್ಲ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ವಿಚಾರವಾಗಿ ಕೋಲಾರದ ಕುರುಡುಮಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಚಾರ ಯುಪಿಎ ಸರ್ಕಾರ ಇದ್ದಾಗಲೇ ಚಿಂತನೆ ಮಾಡಿದ್ದೆವು. ಇದು ನಮ್ಮ ಕೂಸು. ಮಹಿಳಾ ಮೀಸಲಾತಿ ಕುರಿತಾಗಿ 10 ವರ್ಷಗಳ ಹಿಂದೆ ಚಿಂತನೆ ಮಾಡಿದ್ದೆವು. ಈಗ ಬಿಜೆಪಿ ಸರ್ಕಾರ ಮಾಡುತ್ತಿರುವುದರಲ್ಲಿ ವಿಶೇಷ ಏನೂ ಇಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನದ ಹಕ್ಕು ಇರಬೇಕು ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ದೇಶದಲ್ಲಿ ಮಹಿಳೆಯರು ಪುರುಷರು ಸಮಾನಾಗಿ ಬದುಕು ಬೇಕೆಂಬ ಗಾಂಧೀಜಿಯವರ ಕನಸು ಆಗಿತ್ತು. ಯುಪಿಎ ಸರ್ಕಾರ ಇದ್ದಾಗ ಮಹಿಳಾ ಮೀಸಲಾತಿಗೆ ಪೂರಕವಾಗಿ ಮನಮೋಹನ ಸಿಂಗ್, ಸೋನಿಯಾ ಗಾಂಧಿ ಸಾಕಷ್ಟು ಪ್ರಯತ್ನ ಮಾಡಿದ್ದರು ಎಂದು ಹೇಳಿದರು.
ಸಮಾನತೆಯ ದೃಷ್ಟಿಯಿಂದ ಮಹಿಳಾ ಮೀಸಲಾತಿ ಅಂಗೀಕಾರ ಮಾಡಿರುವುದು ಸ್ವಾಗತಾರ್ಹ ಎಂದ ಅವರು, ಇನ್ನೂ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಹೈಕಮಾಂಡ್ ನಿರ್ಧಾರ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರು. ಅದರಂತೆ ದೇವನಹಳ್ಳಿಯಿಂದ ಸ್ಪರ್ಧೆ ಮಾಡಿದೆ, ಜನಾಶೀರ್ವಾದ ಸಿಕ್ಕು ಗೆಲುವು ಸಾಧಿಸಿದ ಹಿನ್ನೆಲೆ ಸಚಿವ ಸ್ಥಾನವೂ ದೊರಕಿದೆ. ಹೀಗಾಗಿ ಮುಂದೆ ಹೈಕಮಾಂಡ್ ಏನು ಹೇಳಿದ್ರೂ ಅದನ್ನು ಪಾಲನೆ ಮಾಡುತ್ತೇನೆ ಎಂದು ಮುನಿಯಪ್ಪ ತಿಳಿಸಿದರು.
ಮೂವರು ಡಿಸಿಎಂಗಳ ವಿಚಾರಕ್ಕೆ ಸಂಬಂಧಿಸಿದಂತೆ, ಪ್ರಾದೇಶಿಕ ಕಾಂಗ್ರೆಸ್ ಸಮಿತಿ, ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಮಹಿಳಾ ಮೀಸಲಾತಿ ವಿಧೇಯಕ ಮಂಡನೆ: ಹೆಚ್ ಡಿ ದೇವೇಗೌಡ ಶ್ಲಾಘನೆ
ಬೆಂಗಳೂರು: ನೂತನ ಸಂಸತ್ ಭವನದಲ್ಲಿ ನಡೆಯುವ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವ ವಿಧೇಯಕ ಮಂಡನೆಯಾಗಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆಯಲ್ಲಿ ಮರು ಮಂಡಿಸಲು ಪರಿಗಣಿಸುವಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ 1996ರಲ್ಲೇ ಮಹಿಳಾ ಮೀಸಲು ವಿಧೇಯಕ ಮಂಡನೆ ಮಾಡುವುದಕ್ಕೆ ಪ್ರಸ್ತಾಪಿಸಿದ್ದನ್ನು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾನು 1996ರಲ್ಲಿ ಪ್ರಧಾನ ಮಂತ್ರಿಯಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿಗೆ ತಂದಿದ್ದರೂ ವಿಧೇಯಕ ಅಂಗೀಕಾರ ಪಡೆಯಲು ಯಶಸ್ವಿಯಾಗಿರಲಿಲ್ಲ. ನಾನು 1995ರಲ್ಲಿ ಪ್ರಧಾನ ಮಂತ್ರಿ ಪಿ ವಿ ನರಸಿಂಹರಾವ್ ಅವರಿಗೆ ಮುಖ್ಯಮಂತ್ರಿಯಾಗಿಯೂ ಮಹಿಳಾ ಮೀಸಲಾತಿಗೆ ಒತ್ತಾಯಿಸಿದ್ದೆ. ನಂತರ 2008ರಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಪಟಾಕಿ ಸಿಡಿಸಿ, ಸಿಹಿಹಂಚಿ ದೇಶಾದ್ಯಂತ ಮಹಿಳೆಯರ ಸಂಭ್ರಮ