ಕೋಲಾರ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಅಜ್ಜಿವೋರ್ವಳು ಬಲಿಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ವ್ಯಾಪ್ತಿಯ ಗುಲ್ಲಹಳ್ಳಿ ಗ್ರಾಮದ ಬಳಿ ಈ ಘಟನೆ ಜರುಗಿದ್ದು, ಗ್ರಾಮದ ಸಿದ್ದಮ್ಮ ಎಂಬ ವೃದ್ಧೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಗುಲ್ಲಹಳ್ಳಿ ಗ್ರಾಮದಿಂದ ತನ್ನ ಮೊಮ್ಮಗನನ್ನ ನೋಡುವ ಸಲುವಾಗಿ ಪಕ್ಕದ ಗೊಡಗಮಂದೆ ಗ್ರಾಮಕ್ಕೆ ನಡೆದುಕೊಂಡು ಹೋಗ್ತಿದ್ದ ವೇಳೆ ಕಾಡಾನೆಯೊಂದು ಹಿಂಬದಿಯಿಂದ ಏಕಾಏಕಿ ದಾಳಿ ನಡೆಸಿದೆ. ಆನೆ ದಾಳಿಯಿಂದ ತಪ್ಪಿಸಿಕೊಳ್ಳಲಾಗದೇ ಸಿದ್ದಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಬೂದಿಕೋಟೆ ವ್ಯಾಪ್ತಿಯಲ್ಲಿ ಸುಮಾರು ಐದು ಕಾಡಾನೆಗಳ ಗುಂಪು ರೈತರ ತೋಟಗಳಿಗೆ ದಾಳಿ ಮಾಡಿ, ರೈತರ ಬೆಳೆಗಳನ್ನ ನಾಶ ಮಾಡಿದೆ. ಈ ಕುರಿತು ಈಗಾಗಲೇ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದು, ಕಾಡಾನೆಗಳನ್ನ ಕಾಡಿಗೆ ಅಟ್ಟುವಂತಹ ತಯಾರಿಯಲ್ಲಿದ್ದರು. ಅಲ್ಲದೆ ಬೂದಿಕೋಟೆ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದ್ದು, ಆಗಾಗ್ಗೆ ಕಾಡಾನೆಗಳ ಹಿಂಡು ಗ್ರಾಮಗಳತ್ತ ಮುಖ ಮಾಡುತ್ತಿದೆ.