ಕೋಲಾರ: ಗಂಡ ಮನೆಗೆ ಸೇರಿಸಿಕೊಳ್ಳುವವರೆಗೂ ಧರಣಿ ಬಿಡುವುದಿಲ್ಲ ಎಂದು ಪತ್ನಿಯೊಬ್ಬಳು ಪತಿಯ ಮನೆಯ ಮುಂದೆ ಮಗುವಿನೊಂದಿಗೆ ಪಟ್ಟುಹಿಡಿದು ಕುಳಿತಿರುವ ಘಟನೆ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಟ್ಟಹಳ್ಳಿಯಲ್ಲಿ ನಡೆದಿದೆ.
ಮೂರು ವರ್ಷಗಳ ಹಿಂದೆ ಇದೇ ಗ್ರಾಮದ ಚೇತನ್ ಹಾಗೂ ಬಂಗಾರಪೇಟೆ ತಾಲೂಕಿನ ಮಾಲಾ ಎಂಬುವವರ ಮದುವೆ ಮಾಡಲಾಗಿತ್ತು. ಮದುವೆಯಾದ ಮೂರೇ ತಿಂಗಳಲ್ಲಿ ಇಬ್ಬರ ನಡುವೆ ಒಡಕು ಆರಂಭವಾಗಿ, ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿದೆ. ಸದ್ಯ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.
ತನ್ನ ಗಂಡ ಬೇರೆ ಮದುವೆ ಆಗುತ್ತಿದ್ದಾನೆ ಎಂಬ ಸುದ್ದಿ ತಿಳಿದು ಬುಧವಾರ ಮಾಲಾ ಪತಿ ಮನೆಗೆ ಬಂದಿದ್ದಾಳೆ. ಮಾಲಾ ಅವರನ್ನು ಮನೆಗೆ ಸೇರಿಸದೆ ಪತಿ ಮನೆಯವರು ಹೊರ ಹಾಕಿದ್ದಾರೆ. 'ನ್ಯಾಯಾಲಯದಲ್ಲಿ ನ್ಯಾಯ ಸಿಗುವುದು ಅನುಮಾನ. ನನಗೆ ಇಲ್ಲಿ ವಾಸ ಮಾಡುವುದಕ್ಕೆ ಅವಕಾಶ ಮಾಡಿಕೊಡಿ' ಎಂದು ಗಂಡನ ಮನೆ ಎದುರು ನಿನ್ನೆಯಿಂದ ತನ್ನ ಮಗುವಿನೊಂದಿಗೆ ಪಟ್ಟುಹಿಡಿದು ಕುಳಿತಿದ್ದಾಳೆ.
ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತಿದ್ದೇನೆ ಎಂಬುದೆಲ್ಲ ಸುಳ್ಳು. ತಾನು ಹೇಳಿದ್ದೇ ನಡೆಯಬೇಕೆಂಬ ಅವಳ ಹಠದಿಂದ ಇಂದು ನಮ್ಮ ಸಂಸಾರ ಈ ಪರಿಸ್ಥಿತಿಗೆ ಬಂದಿದೆ. ಮಾಲಾ ಕುಟುಂಬದವರಿಂದ ನನಗೆ ಜೀವ ಬೆದರಿಕೆ ಇರುವುದರಿಂದ ಮನೆಯಿಂದ ಹೊರಹಾಕಿದ್ದೇನೆ ಎನ್ನುವುದು ಪತಿ ಚೇತನ್ ಆರೋಪ.