ಕೋಲಾರ: ಬಿಜೆಪಿ ಶಾಸಕ ಹಾಗು ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿದ್ದು, ಅವರ ನೆರವಿಗೆ ನಾವಿದ್ದೇವೆ ಎಂದು ನಗರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಪ ಅಜ್ಞಾತ ಸ್ಥಳದಿಂದ ರಕ್ಷಣೆ ಕೋರಿ ಯುವತಿ ಮನವಿ ಮಾಡಿದ್ದಾಳೆ. ಸಾರ್ವಜನಿಕ ಜೀವನದಲ್ಲಿರುವ ನಾವು ಆಕೆ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಎಂದರು.
ಈಗಾಗಲೇ ವಿಧಾನಸಭೆಯಲ್ಲಿ ಸಂತ್ರಸ್ತೆಯ ರಕ್ಷಣೆ ಕುರಿತು ಮಾತನಾಡಿದ್ದು, ಖಂಡಿತ ಆಕೆಗೆ ರಕ್ಷಣೆ ಒದಗಿಸುತ್ತೇವೆ. ಇನ್ನು ಆಕೆ ಹೆದರಬೇಕಾಗಿಲ್ಲ, ನಮ್ಮದೇನು ಅನಾಗರಿಕ ಸಮಾಜವಲ್ಲ, ಒಂದು ಹೆಣ್ಣು ಮಗಳು ಸಂಕಷ್ಟದಲ್ಲಿದ್ದು ಸಹಾಯ ಕೇಳಿದ್ದಾಳೆ. ಆಕೆಯ ನೆರವಿಗೆ ನಾವು ನಿಲ್ಲುತ್ತೇವೆ ಎಂದರು.
'ಯುವತಿ ನ್ಯಾಯಧೀಶರ ಎದುರು ಹೇಳಿಕೆ ನೀಡಲಿ'
ಎಸ್.ಐ.ಟಿ ಮುಂದೆ ಹೇಳಿಕೆ ನೀಡಲು ಒತ್ತಡವಿದ್ದರೆ, ನ್ಯಾಯಾಧೀಶರೆದುರು ಹೇಳಿಕೆ ನೀಡಲಿ, ಅದು ಅಧಿಕೃತವಾಗುತ್ತದೆ ಎಂದು ಯುವತಿಗೆ ಇದೇ ವೇಳೆ ಅವರು ಸಲಹೆ ನೀಡಿದರು. ಅಲ್ಲದೆ ಸದ್ಯಕ್ಕೆ ಆಕೆ ಅಜ್ಞಾತ ಸ್ಥಳದಲ್ಲಿದ್ದಾಳೆ, ಧೈರ್ಯವಾಗಿ ಬಂದು ಹೇಳಿಕೆ ನೀಡಲಿ ಎಂದರು.
'ನಾನು ಗೃಹ ಮಂತ್ರಿ ಅಲ್ಲ'
ನನಗೂ ಒಬ್ಬ ಹೆಣ್ಣು ಮಗಳಿದ್ದಾಳೆ, ಆಕೆಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಲ್ಲವೇ?. ಇನ್ನು ಆಕೆಗೆ ವಿಶೇಷ ರಕ್ಷಣೆ ನೀಡುವುದಕ್ಕೆ ನಾನು ಗೃಹಮಂತ್ರಿ ಅಲ್ಲ, ನಮ್ಮ ಕೆಲಸವನ್ನು ಶ್ರದ್ಧೆ ನಿಷ್ಠೆಯಿಂದ ಮಾಡುತ್ತೇವೆ, ಗೌರವಯುತವಾಗಿ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.