ಬಂಗಾರಪೇಟೆ(ಕೋಲಾರ): ಸರ್ಕಾರಿ ಕೆಲಸದ ವೇಳೆ ಕೋಲಾರದಲ್ಲಿ ಗ್ರಾಮಲೆಕ್ಕಿಗನೋರ್ವ ತಮ್ಮ ಕಚೇರಿಯಲ್ಲೇ ಯುವಕರೊಂದಿಗೆ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಹುನಕುಂದ ಗ್ರಾಮದಲ್ಲಿ ನಡೆದಿದೆ. ಪಾರ್ಟಿಯ ವಿಡಿಯೋ ವೈರಲ್ ಆಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುನಕುಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿನಾಶ್ ಕಾಂಬ್ಳೆ ಯುವಕರೊಂದಿಗೆ ಸರ್ಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿ ಇದೀಗ ಸಿಕ್ಕಿ ಬಿದ್ದಿದ್ದಾನೆ.
ಕಚೇರಿಯಲ್ಲಿ ರಾಶಿ ರಾಶಿ ಕಡತಗಳ ನಡುವೆ ಸರ್ಕಾರಿ ಕೆಲಸ ಮಾಡಿಕೊಂಡು, ತನ್ನ ಸ್ನೇಹಿತರೊಂದಿಗೆ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತನಿಖೆಗೆ ಆದೇಶಿಸಿದ್ದಾರೆ. ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಅವರಿಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಸ್ಥಳಕ್ಕೆ ತಹಶೀಲ್ದಾರ್ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಗುಮಾಸ್ತನೋರ್ವ ಪಾರ್ಟಿ ಮಾಡಿದ್ದ ಸ್ಥಳವನ್ನ ಸ್ವಚ್ಛ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ.