ಕೋಲಾರ: ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಬಹುತೇಕ ಸುಖಾಂತ್ಯ ಕಂಡಿದೆ. ಪ್ರಕರಣದ ಸಂಬಂಧ ಕಿಂಗ್ಪಿನ್ ಕವಿರಾಜ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ನಾಪತ್ತೆಯಾಗಿದ್ದಾನೆ. ಶ್ರೀಘ್ರದಲ್ಲಿ ಆತನನ್ನು ಬಂಧಿಸಲಾಗುವುದು ಎಂದು ಕೋಲಾರದಲ್ಲಿ ಐಜಿ ಸೀಮಂತ್ ಕುಮಾರ್ ಹೇಳಿದರು.
ಕೋಲಾರದ ಎಸ್ಪಿ ಕಚೇರಿಯಲ್ಲಿ ಐಜಿ ಸೀಮಂತ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ ಸಂಬಂಧ ಆರಂಭದಲ್ಲಿ ಯಾವುದೇ ಮಾಹಿತಿ ಪೊಲೀಸರಲ್ಲಿ ಇರಲಿಲ್ಲ. ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಕೇಸ್ ಶಿಫ್ಟ್ ಆದ್ಮೇಲೆ ತನಿಖೆ ಆರಂಭಿಸಿಲಾಯಿತು. ಆರೋಪಿಗಳ ಪತ್ತೆಗಾಗಿ 25 ಜನರ ತಂಡ ರಚನೆ ಮಾಡಿ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಸುತ್ತಾಡಿ ಒಟ್ಟು ಆರು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ ಎಂದು ತಿಳಿಸಿದರು.
ತಮಿಳುನಾಡಿನ ಮಧುರೈನಲ್ಲಿದ್ದ ಎ1 ಆರೋಪಿ ಕವಿರಾಜ್ ಈ ಕೇಸ್ನ ಮುಖ್ಯ ಆರೋಪಿಯಾಗಿದ್ದು, ಇವನ ವಿರುದ್ಧ ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ 10 ಕೇಸ್ಗಳಿವೆ. ಉಳಿದಂತೆ ಲಿಖಿತ್(20), ಉಲ್ಲಾಸ್(21), ಮನೋಜ್(20), ರಾಘವೇಂದ್ರ(34), ಪ್ರವೀಣ್(20) ಬಂಧಿತರು. ಮತ್ತೊಬ್ಬ ನಾಪತ್ತೆಯಾಗಿದ್ದು, ಶ್ರೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೇಳಿದರು.
ವರ್ತೂರ್ ಅಪಹರಣ ಸಂಪೂರ್ಣವಾಗಿ ಹಣಕ್ಕಾಗಿ ಮಾಡಲಾಗಿದೆ. ಇದ್ರಲ್ಲಿ ಯಾವುದೇ ಅನುಮಾನವಿಲ್ಲ. ಕಿಡ್ನಾಪರ್ಸ್ ಹಣಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿ ಇವರನ್ನು ಅಪಹರಣ ಮಾಡಿದ್ದಾರೆ. ಕಿಡ್ನಾಪ್ ನಡೆದು ಮೂರು ದಿನಗಳಲ್ಲಿ 48 ಲಕ್ಷವನ್ನು ವರ್ತೂರ್ ಸ್ನೇಹಿತರು ಕೂಡಿಸಿ ಹಣವನ್ನು ಕಿಡ್ನಾಪರ್ಸ್ಗೆ ಕೊಟ್ಟಿದ್ದಾರೆ. ಇನ್ನು 20 ಲಕ್ಷ 50 ಸಾವಿರ ರೂಪಾಯಿಗಳನ್ನು ಅಪಹರಣಕಾರರಿಂದ ರಿಕವರಿ ಮಾಡಿದ್ದೇವೆ. ಇನ್ನುಳಿದ ಹಣ ಆರೋಪಿಗಳಿಂದಲೇ ರಿಕವರಿ ಮಾಡಲಾಗುವುದಾಗಿ ತಿಳಿಸಿದರು.
ಕೃತ್ಯಕ್ಕೆ ಬಳಸಿದ್ದ ಒಂದು ಇನೋವಾ, 2 ಮಾರುತಿ ಸ್ವಿಫ್ಟ್, ಒಂದು ಮಾರುತಿ ರಿಟ್ಜ್, 1 ಕೆಟಿಎಂ ಡ್ಯುಕ್, ಡ್ರ್ಯಾಗರ್, ಕಬ್ಬಿಣದ ಲಾಂಗ್, ಬೇಸ್ ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟ್, ಮಂಕಿ ಟೋಪಿಯನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಇನ್ನು ಎಸ್ಪಿ ಕಾರ್ತಿಕ್ ರಡ್ಡಿ ಮಾರ್ಗದರ್ಶನದಲ್ಲಿ 25 ಜನರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಪ್ರಕರಣವನ್ನು ಭೇದಿಸಿದೆ. ಒಟ್ಟಾರೆ ರಾಜ್ಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ತನಿಖೆಯ ಸಿಬ್ಬಂದಿಗೆ 50 ಸಾವಿರ ನಗದು ಹಾಗೂ ಒಂದೊಂದು ಸರ್ಟಿಫಿಕೇಟ್ ನೀಡಿ ಕೋಲಾರ ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಐಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.